Advertisement

 ವೈದ್ಯಕೀಯ ಸಲಕರಣೆ ಕೊರತೆ ಕಾಡದಿರಲಿ: ಅಧಿಕಾರಿಗಳಿಗೆ ಮೋದಿ ಸೂಚನೆ

05:49 PM Apr 05, 2020 | Hari Prasad |

ಕೋವಿಡ್ 19 ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವೈಯಕ್ತಿಕ ರಕ್ಷಣಾ ಸಲಕರಣೆ, ಮಾಸ್ಕ್, ಕೈಗವಸು, ವೆಂಟಿಲೇಟರ್‌ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆಸ್ಪತ್ರೆಗಳ ಲಭ್ಯತೆ, ಸೋಂಕಿತ ವ್ಯಕ್ತಿಗಳಿಗೆ ಸರಿಯಾಗಿ ಪ್ರತ್ಯೇಕ ವಾಸದ ವ್ಯವಸ್ಥೆ ಕಲ್ಪಿಸುವುದು, ಕ್ವಾರಂಟೈನ್‌ ಸೌಲಭ್ಯ, ಸೋಂಕು ಹರಡದಂತೆ ನಿಗಾ ವಹಿಸುವುದು, ಪರೀಕ್ಷೆ, ಸೋಂಕಿತ ವ್ಯಕ್ತಿಗಳ ಬಗೆಗಿನ ಕಾಳಜಿ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ದೇಶಾದ್ಯಂತ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪ್ರಧಾನಿಯವರು ಪರಿಶೀಲನೆ ನಡೆಸಿದರು.

Advertisement

ರಫ್ತು ನಿಷೇಧ: ವೈದ್ಯಕೀಯ ಕಿಟ್‌ಗಳ ರಫ್ತನ್ನು ತಕ್ಷಣದಿಂದ ನಿರ್ಬಂಧಿಸುವ ಮೂಲಕ ಕೋವಿಡ್ ಕರ್ಫ್ಯೂಗೆ ಕೇಂದ್ರ ಸರಕಾರ ಮತ್ತಷ್ಟು ಬಲ ತುಂಬಿದೆ. ಲ್ಯಾಬರೋಟರಿಗೆ ಬೇಕಾದ ಪರಿಕರಗಳು, ಅದನ್ನು ತಯಾರಿಸುವ ಎಲ್ಲದಕ್ಕೂ ತಕ್ಷಣವೇ ನಿಲ್ಲಿಸುವಂತೆ ವಿದೇಶ ವ್ಯವಹಾರಗಳ ನಿರ್ದೇಶಕರು ಆದೇಶಸಿದ್ದಾರೆ. ಸರಕಾರದ ಈ ನಿಲುವಿನಿಂದ ದೇಶದಲ್ಲಿರುವ ಕೋವಿಡ್ 19 ವೈರಸ್ ಪೀಡಿತರನ್ನು ಪರೀಕ್ಷಿಸಲು ನೆರವಾಗಲಿದೆ.

ವಿತರಣೆಗೆ ಬೆಂಗಳೂರಿನ ಸಂಸ್ಥೆ
ದೇಶದಲ್ಲಿ ವೈದ್ಯ ಸಿಬಂದಿಗೆ ಕೋವಿಡ್ 19 ವೈರಸ್ ಪೀಡಿತರ ಚಿಕಿತ್ಸೆಗೆ ಅಗತ್ಯವಾಗಿರುವ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಖರೀದಿಗೆ ಬೆಂಗಳೂರಿನ ಸಂಸ್ಥೆಯೊಂದನ್ನು ಕೇಂದ್ರ ಸರಕಾರ ಗುರುತಿಸಿದೆ. ಅದರಿಂದಲೇ 4,000 ಪಿಪಿಇಗಳನ್ನು ಖರೀದಿಸಿ, ಅವುಗಳನ್ನು 29 ರಾಜ್ಯಗಳಲ್ಲಿನ ತನ್ನ ಪ್ರತಿನಿಧಿಗಳಿಗೆ ನೇರವಾಗಿ ತಲುಪಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ವೈದ್ಯಕೀಯ ಸಿಬಂದಿ ಸುರಕ್ಷತೆಗಾಗಿ 40 ಲಕ್ಷ ರೂ.ಮೀಸಲಾಗಿ ಇರಿಸಲಾಗುತ್ತದೆ ಎಂದು ಅಸೋಸಿಯೇಷನ್‌ ಆಫ್ ಸರ್ಜನ್ಸ್‌ ಆಫ್ ಇಂಡಿಯಾ (ಎಎಸ್‌ಐ) ತಿಳಿಸಿದೆ.

50 ಸಾವಿರ ಪಿಪಿಇ ಕಿಟ್‌ ಕೊಡಿ: ಮನವಿ
ಕೋವಿಡ್ 19 ವೈರಸ್ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಪರ್ಸನಲ್‌ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್‌ ಗಳಿಗೆ (ಪಿಪಿಇ) ಕೊರತೆಯುಂಟಾಗಲಿದೆ. ಕೇಂದ್ರ ಸರಕಾರಕ್ಕೆ ಕೂಡಲೇ 50,000 ಪಿಪಿಇ ಕಿಟ್‌ಗಳು ಬೇಕು ಎಂದು ಮನವಿ ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಶನಿವಾರ ಮಾಧ್ಯಮಗಳೆದುರು ಹೇಳಿದ್ದಾರೆ.

ಈಗ ನಮ್ಮಲ್ಲಿ 7,000ದಿಂದ 8,000 ಕಿಟ್‌ಗಳು ಇವೆ. ಇವು ಇನ್ನು 2-3 ದಿನಗಳಲ್ಲಿ ಖಾಲಿಯಾಗಲಿವೆ ಹೀಗಾಗಿ ತ್ವರಿತವಾಗಿ ಕೇಂದ್ರ ನಮಗೆ ಕಿಟ್‌ಗಳನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next