Advertisement

13ನೇ ವಯಸ್ಸಲ್ಲಿ ನಾಟಕ ರಚಿಸಿ, ಅಭಿನಯಿಸಿದ್ದ ಪ್ರಧಾನಿ ನರೇಂದ್ರ ಮೋದಿ

10:04 AM Sep 18, 2019 | sudhir |

ವಡ್‌ನ‌ಗರ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಪ್ರಿಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಾಲ್ಯದ ಬಗ್ಗೆ ಹಲವಾರು ಕುತೂಹಲದ ಕಥೆಗಳಿವೆ. ಶಾಲೆಯ ದಿನಗಳಲ್ಲಿ ಅವರು ನಟನೆ ಮತ್ತು ನಾಟಕಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಅಂಶವನ್ನು ಎಂ.ವಿ.ಕಾಮತ್‌ ಮತ್ತು ಕಾಳಿಂದಿ ರಂಡೇರಿ ಬರೆದ “ದ ಮ್ಯಾನ್‌ ಆಫ್ ದ ಮೊಮೆಂಟ್‌: ನರೇಂದ್ರ ಮೋದಿ’ ಎಂಬ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ. ವಡ್‌ನ‌ಗರದಲ್ಲಿರುವ ಅವರ ಶಾಲೆಯ ಕಾಂಪೌಂಡ್‌ ಗೋಡೆ ದುರಸ್ತಿಗೆ ಹಣ ಸಂಗ್ರಹಿಸಲು ಮೋದಿ ಸ್ನೇಹಿತರ ಜತೆಗೂಡಿ ನಿರ್ಧರಿಸಿದ್ದರು. 13ನೇ ವಯಸ್ಸಿನಲ್ಲಿ ಅದೇ ಉದ್ದೇಶಕ್ಕಾಗಿ ನಾಟಕ ಬರೆದಿದ್ದರು. “ಪೀಲು ಫ‌ೂಲ್‌’ (ಹಳದಿ ಹೂವು) ಎಂಬ ಹೆಸರಿನ ನಾಟಕ ಅದಾಗಿತ್ತು. 1963-64ರ ಸಮಯದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಅಸೌಖ್ಯತೆಯಿಂದ ಬಳಲುತ್ತಿದ್ದ ದಲಿತ ಮಹಿಳೆಯ ಮಗನಿಗೆ ಗ್ರಾಮದ ವೈದ್ಯ ಚಿಕಿತ್ಸೆ ನೀಡಲು ನಿರಾಕರಿಸಿದ್ದು ಅದರ ಕಥಾ ವಸ್ತುವಾಗಿತ್ತು. ಮತ್ತೂಂದು ಘಟನೆಯಲ್ಲಿ ಶಾಲೆಗಾಗಿ ನಾಟಕದಲ್ಲಿ ಪಾತ್ರ ವಹಿಸಿದ್ದ ವೇಳೆ ತರಬೇತಿ ನೀಡುತ್ತಿದ್ದ ಶಿಕ್ಷಕರು ಮೋದಿ ಸಂಭಾಷಣೆಗಳನ್ನು ಪ್ರಸ್ತುತಪಡಿಸುತ್ತಿದ್ದ ರೀತಿಯ ಬಗ್ಗೆ ಆಕ್ಷೇಪ ಮಾಡಿದ್ದರು.

Advertisement

ಮಾರನೇ ದಿನ ಶಿಕ್ಷಕರ ಬಳಿ ತಾವು ಹೇಗೆ ಅಭಿನಯಿಸುತ್ತಿದ್ದೆ ಎನ್ನುವುದನ್ನು ನಟಿಸಿ ತೋರಿಸಲು ಹೇಳಿದಾಗ ಶಿಕ್ಷಕರು ಮೋದಿಯವರ ತಪ್ಪು ಏನು ಎಂದು ಹೇಳಿದ್ದರು. ನಂತರ ಅದನ್ನು ತಿದ್ದಿಕೊಂಡೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಪ್ರಧಾನಿಯವರೇ ಬರೆದ “ಎಕ್ಸಾಂ ವಾರಿಯರ್ಸ್‌’ ಎಂಬ ಪುಸ್ತಕದಲ್ಲಿಯೂ ಈ ಅಂಶ ಉಲ್ಲೇಖವಾಗಿದೆ.

ಸಿದ್ಧಗೊಂಡಿದೆ ಆಸ್ಪತ್ರೆ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮೂರು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿಂದ ಕೂಡ ಆಸ್ಪತ್ರೆಯಾಗಿ ಮಾರ್ಪಾಡಾಗಿದೆ. ಹೊಸತಾಗಿ ಸ್ಥಾಪನೆಗೊಂಡಿರುವ ವಡ್‌ನ‌ಗರ ವೈದ್ಯಕೀಯ ಕಾಲೇಜಿಗೆ ಸರ್ಕಾರಿ ಆಸ್ಪತ್ರೆಯನ್ನು ಸೇರ್ಪಡೆಗೊಳಿಸಿದ್ದರಿಂದ ಈ ಬದಲಾವಣೆಯಾಗಿದೆ. ಈಗ 400 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಪ್ರತಿ ದಿನ 1 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಆಸ್ಪತ್ರೆಯಿಂದ ಸುತ್ತಮುತ್ತಲ ಪ್ರದೇಶಗಳಿಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next