ನವದೆಹಲಿ:ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆಯುತ್ತಿದ್ದರೂ ಯಾವುದೇ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ. ಗಡಿಯಲ್ಲಿನ ಉದ್ವಿಗ್ನ ವಾತಾವರಣದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲಡಾಖ್ ನ ರಾಜಧಾನಿ ಲೇಹ್ ಗೆ ಭೇಟಿ ನೀಡಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ಜನರಲ್ ಬಿಪಿನ್ ರಾವತ್ ಅವರ ಜತೆಗೂಡಿ ಲೇಹ್ ಗೆ ಭೇಟಿ ನೀಡಿದ್ದು, ಸೇನಾ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಇಂದು ಸಂಜೆ ಸೇನಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ವರದಿ ವಿವರಿಸಿದೆ.
ಲೇಹ್ ನಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಎಲ್ ಎಸಿ ನಿಮೋದಲ್ಲಿನ ಪ್ರಸ್ತುತ ಸ್ಥಿತಿ ಹೇಗಿದೆ ಎಂಬುದನ್ನು ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ, ಸಿಡಿಎಸ್ ರಾವತ್ ಮತ್ತು ಆರ್ಮಿ ಚೀಫ್ ಜನರಲ್ ಮನೋಜ್ ಮುಕುಂದ್ ನರಾವಣೆ ಅವರಿಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಜೂನ್ 15ರಂದು ಚೀನಾ ಸೈನಿಕರು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಮಾತುಕತೆಗೆ ತೆರಳಿದ್ದ ಭಾರತೀಯ ಸೈನಿಕರ ಮೇಳೆ ಏಕಾಏಕಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 20 ಮಂದಿ ಭಾರತೀಯರು ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ತಲೆದೋರಿತ್ತು.