Advertisement

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಆರಂಭ

09:27 AM Sep 22, 2019 | mahesh |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಒಂದು ವಾರ ಕಾಲದ ಅಮೆರಿಕ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ಶನಿವಾರ ಹೂಸ್ಟನ್‌ಗೆ ತೆರಳಲಿದ್ದಾರೆ.
ಹೂಸ್ಟನ್‌ನಲ್ಲಿ ಬಹುನಿರೀಕ್ಷಿತ “ಹೌಡಿ’ ಮೋದಿ ಕಾರ್ಯಕ್ರಮ ರವಿವಾರ ನಡೆಯಲಿದ್ದರೆ, ಪ್ರವಾಸದ ಕೊನೆಯ ದಿನ ಅಂದರೆ ಸೆ. 27ರಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಲಿದ್ದಾರೆ. ಒಟ್ಟು ಆರು ದಿನಗಳ ಈ ಭೇಟಿಯಲ್ಲಿ 20ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ.

Advertisement

ಸೆ. 21: ಸಿಇಒಗಳ ಜತೆ ಮಾತು
ಹೂಸ್ಟನ್‌ನಲ್ಲಿ ಶನಿವಾರ 16 ಪ್ರಮುಖ ಕಂಪೆನಿಗಳ ಸಿಇಒಗಳ ಜತೆ ಮಾತುಕತೆ ನಡೆಸಲಿದ್ದಾರೆ. ಎಕ್ಸಾನ್‌ ಮೊಬಿಲ್‌, ಬಿಪಿ ಮತ್ತು ಎಮ್ಮರ್ಸನ್‌ ಎಲೆಕ್ಟ್ರಿಕ್‌ ಕಂಪೆನಿ ಸಹಿತ ಹಲವು ಕಂಪೆನಿಗಳ ಸಿಇಒ ಇದರಲ್ಲಿ ಭಾಗವಹಿಸಲಿದ್ದಾರೆ.

ಸೆ. 22: ಹೌಡಿ ಮೋದಿ
ಮರುದಿನ ಅಂದರೆ ರವಿವಾರ, ಸೆ. 24 ರಂದು ಹೌಡಿ ಮೋದಿ ಕಾರ್ಯಕ್ರಮ ಹೂಸ್ಟನ್‌ನಲ್ಲಿ ನಡೆಯಲಿದ್ದು, 50 ಸಾವಿರ ಅನಿವಾಸಿ ಭಾರತೀಯರು ಸೇರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಮೋದಿ ಜತೆಗೆ ಇರಲಿದ್ದಾರೆ. ಇದರೊಂದಿಗೆ ನ್ಯೂಯಾರ್ಕ್‌ನಲ್ಲಿ 45 ಎಂಎನ್‌ಸಿಗಳ ಸಿಇಒ ಜತೆಗೆ ಸಭೆ ನಡೆಸಲಿದ್ದಾರೆ.

ಸೆ.23: ವಿಶ್ವನಾಯಕರ ಜತೆ ಮಾತುಕತೆ
ಹವಾಮಾನ ವೈಪರೀತ್ಯ, ಸಮಗ್ರ ಆರೋಗ್ಯ ಸೇವೆ ಸಮ್ಮೇಳನ ಮತ್ತು ಉಗ್ರ ಚಟುವಟಿಕೆಗಳ ಪ್ರತಿಕ್ರಿಯೆ ಕುರಿತ ವಿಶ್ವನಾಯಕರ ಜತೆ ಮಾತುಕತೆ ಕಾರ್ಯಕ್ರಮದಲ್ಲಿ ಭಾಗಿ. ಈ ಸಮ್ಮೇಳನಗಳಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಕೂಡ ಭಾಗವಹಿಸಲಿದ್ದಾರೆ. ಅಲ್ಲದೆ ನ್ಯೂಯಾರ್ಕ್‌ ಬಿಗ್‌ ಆಪಲ್‌ ನಗರಕ್ಕೆ ಪ್ರಯಾಣಿಸಲಿದ್ದಾರೆ.

ಸೆ. 24: ಗೇಟ್ಸ್‌ ಫೌಂಡೇಶನ್‌ ಪ್ರಶಸ್ತಿ
ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ನಿಂದ ಪ್ರಧಾನಿ ಮೋದಿ ಪ್ರಶಸ್ತಿ ಸ್ವೀಕರಿಸ ಲಿದ್ದಾರೆ. ಅಲ್ಲದೆ, ಮಹಾತ್ಮ ಗಾಂಧಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಸಿಂಗಾಪುರ ಮತ್ತು ದಕ್ಷಿಣ ಕೊರಿಯ ಸಹಿತ ಹಲವು ದೇಶಗಳ ಗಣ್ಯರು ಇರಲಿದ್ದಾರೆ.

Advertisement

ಸೆ.25: ಬ್ಯುಸಿನೆಸ್‌ ಫೋರಂನಲ್ಲಿ ಭಾಷಣ
ಬ್ಲೂಮ್‌ಬರ್ಗ್‌ ಗ್ಲೋಬಲ್‌ ಬ್ಯುಸಿನೆಸ್‌ ಫೋರಂನಲ್ಲಿ ಭಾಷಣ ಮಾಡಲಿದ್ದು, ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. 40 ಪ್ರಮುಖ ಕಂಪೆನಿಗಳ ಅಧಿಕಾರಿಗಳನ್ನು ಭೇಟಿ ಮಾಡಿ, ಭಾರತದಲ್ಲಿ ವ್ಯಾಪಾರ ವಹಿವಾಟು ಯೋಜನೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲಿದ್ದಾರೆ. ಕೆರಿಬಿಯನ್‌ ಕಮ್ಯೂನಿಟಿ ಯೊಂದಿಗೆ ಸಭೆ ನಡೆಸಲಿದ್ದಾರೆ.

ಸೆ. 26: ಗಾಂಧೀ ಉದ್ಯಾನವನ
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಗಾಂಧಿ ಪೀಸ್‌ ಗಾರ್ಡನ್‌ ಉದ್ಘಾಟನೆ ಮಾಡಲಿದ್ದಾರೆ. ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನದ ನೆನಪಿಗಾಗಿ ವಿಶ್ವಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಸೌರ ವಿದ್ಯುತ್‌ ಘಟಕಕ್ಕೆ ಭಾರತವು ಸೌರ ಫ‌ಲಕಗಳನ್ನು ಒದಗಿಸಿದೆ.

ಸೆ. 27: ವಿಶ್ವಸಂಸ್ಥೆಯಲ್ಲಿ ಭಾಷಣ
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇದರ ಜತೆಗೆ ವಿಶ್ವದ ಇತರ ಗಣ್ಯರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಅಮೆರಿಕದೊಂದಿಗೆ ನಮ್ಮ ಸಂಬಂಧಕ್ಕೆ ಹೊಸ ಚೈತನ್ಯ ನೀಡಲು ಈ ಪ್ರವಾಸ ನೆರವಾಗಲಿದೆ. ಭಾರತೀಯ ಸಮುದಾಯದ ಕಾರ್ಯಕ್ರಮ ವೊಂದಕ್ಕೆ ಅಮೆರಿಕದ ಅಧ್ಯಕ್ಷರು ಭಾಗವಹಿಸುತ್ತಿರುವುದೂ ಇದೇ ಮೊದಲು.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next