ಉಡುಪಿ: ಕರಾವಳಿಯ ಭಾಗದಲ್ಲಿ ಮೇ 3ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸಲಾಗಿದೆ.
ಪ್ರಧಾನಿಯವರು ಮೂಲ್ಕಿ ಸಮೀಪದ ಕೊಳ್ನಾಡು ಹಾಗೂ ಬಳಿಕ ಅಂಕೋಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹೆಚ್ಚುವರಿ ಭದ್ರತೆಗಾಗಿ ಕೋಸ್ಟ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯ 200 ಸಿಬಂದಿ, 200 ಮಂದಿ ಪೊಲೀಸರು ಹಾಗೂ ಇತರ 50 ಮಂದಿ ಕಡಲತೀರ ಹಾಗೂ ಸಮುದ್ರದಲ್ಲಿ ಗಸ್ತು ನಿರತರಾಗಿದ್ದಾರೆ.
ಸೋಮವಾರದಿಂದಲೇ ಸಮುದ್ರದಲ್ಲಿ ಹಲವು ಬಾರಿ ಗಸ್ತು ಕಾರ್ಯಾಚರಣೆ ನಡೆದಿದ್ದು, ಗುರುವಾರದವರೆಗೂ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಸ್ಥಳೀಯ ಪೊಲೀಸರು ಹಾಗೂ ಗರುಡಾ ದಳ ಕೂಡ ಕಾರ್ಯಾಚರಣೆಗಿಳಿದಿದೆ. ಭದ್ರತೆ ಗಾಗಿ ಹೆಚ್ಚುವರಿ ಶಿಪ್‌ಗ್ಳನ್ನು ಕೂಡ ನಿಯೋಜಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಲಾಡ್ಜ್ಗಳು, ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಪರಿಶೀಲಿಸಲಾಗಿದೆ. ಕೆರ್ವಾಶೆ, ಬೈಂದೂರು, ಕುಂದಾಪುರ ನಗರ, ಕಾರ್ಕಳ ನಗರಗಳಲ್ಲಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬಂದಿ ಪಥ ಸಂಚಲನ ನಡೆಸಿದರು.
ಬೈಂದೂರಿನ ಗುಲ್ವಾಡಿ ಮಾವಿನ ಕಟ್ಟೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳು, ಸಿಬಂದಿ, ಕುಂದಾಪುರ ವೃತ್ತದ ಅಧಿಕಾರಿ ಸಿಬಂದಿಗಳು ಪಥ ಸಂಚಲನೆ ನಡೆಸಿದರು. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಚಿಸಿರುವ ಚೆಕ್‌ಪೋಸ್ಟ್‌ಗಳಲ್ಲಿಯೂ ಮಂಗಳವಾರ ವಿಶೇಷ ತಪಾಸಣೆ ನಡೆಸಲಾಯಿತು.
ಉಡುಪಿ ಪೊಲೀಸರು ಅಂಕೋಲಾಕ್ಕೆ
ಉತ್ತರ ಕನ್ನಡದ ಅಂಕೋಲಾಕ್ಕೂ ಪ್ರಧಾನಿ ಭೇಟಿ ನೀಡಲಿರುವ ಕಾರಣ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಒಬ್ಬರು ಡಿವೈಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್ ಹಾಗೂ 100 ಮಂದಿ ಪೊಲೀಸರು ಕರ್ತವ್ಯಕ್ಕಾಗಿ ಅಲ್ಲಿಗೆ ತೆರಳಿದ್ದಾರೆ.