ದೋಡಾ : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಕೊನೆಯುಸಿರೆಳೆಯುತ್ತಿದೆ. ಈ ಸುಂದರ ಪ್ರದೇಶವನ್ನು ನಾಶಪಡಿಸಿದ ರಾಜವಂಶದ ರಾಜಕೀಯವನ್ನು ಎದುರಿಸಲು ನಮ್ಮ ಸರಕಾರ ಹೊಸ ನಾಯಕತ್ವವನ್ನು ಸಿದ್ಧಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರ ದೋಡಾ ಜಿಲ್ಲೆಯಲ್ಲಿ ಚುನಾವಣ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾವು ಮತ್ತು ನೀವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವಾಗಿ ಮಾಡುತ್ತೇವೆ” ಎಂದರು.
ಸೆಪ್ಟೆಂಬರ್ 18 ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನಡೆಸಿದ ಮೊದಲ ಚುನಾವಣ ರ‍್ಯಾಲಿ ಇದಾಗಿದೆ.
“ಸ್ವಾತಂತ್ರ್ಯದ ನಂತರ, ಜಮ್ಮು ಮತ್ತು ಕಾಶ್ಮೀರವು ವಿದೇಶಿ ಶಕ್ತಿಗಳ ಗುರಿಯಾಯಿತು, ರಾಜವಂಶದ ರಾಜಕೀಯವು ಈ ಸುಂದರ ಪ್ರದೇಶವನ್ನು ಒಳಗಿನಿಂದ ಟೊಳ್ಳಾಗಿಸಿತು. ರಾಜಕೀಯ ರಾಜವಂಶಗಳು ತಮ್ಮ ಮಕ್ಕಳನ್ನು ಮುಂದಿಟ್ಟುಕೊಂಡು ಹೊಸ ನಾಯಕತ್ವ ಬೆಳೆಯಲು ಬಿಡಲಿಲ್ಲ. ನಾವು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಯುವ ನಾಯಕತ್ವವನ್ನು ಕೆತ್ತಲು ನಮ್ಮ ಸರಕಾರವು ಗಮನಹರಿಸಿದೆ” ಎಂದರು.
”ರೈಲ್ವೆ ಜಾಲದ ಮೂಲಕ ಜಮ್ಮು ಮತ್ತು ಕಾಶ್ಮೀರದ ಲಿಂಕ್ ಮಾಡದ ಪ್ರದೇಶಗಳನ್ನು ಸಂಪರ್ಕಿಸಿ, ಶೀಘ್ರದಲ್ಲೇ ರೈಲುಗಳು ಕಾಶ್ಮೀರ ಕಣಿವೆಯನ್ನು ತಲುಪುತ್ತವೆ ಎಂದು ಘೋಷಿಸಿದರು. ಶ್ರೀನಗರ ಮತ್ತು ರಾಂಬನ್ ನಡುವಿನ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಓಡಾಟ ಆರಂಭವಾಗಿದೆ.ಶೀಘ್ರದಲ್ಲೇ, ರಾಂಬನ್, ದೋಡಾ, ಕಿಶ್ತ್ವಾರ್ ಮತ್ತು ಕಾಶ್ಮೀರದ ಜನರು ರೈಲಿನಲ್ಲಿ ನೇರವಾಗಿ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ನಿಮ್ಮ ಕನಸನ್ನು ನನಸು ಮಾಡುತ್ತೇನೆ” ಎಂದು ಪ್ರಧಾನಿ ಹೇಳಿದರು.