ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫೆ.14ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಕೇಂದ್ರದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿಯವರು ಬಳಿಕ ಬಿಜೆಪಿಯ ಕೋರ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರ ನೇತೃತ್ವದಲ್ಲಿ ನಡೆಯಲಿರುವ ವಿಜಯ ಯಾತ್ರೆ ಆರಂಭಗೊಳ್ಳುವ ಮೊದಲೇ ಪ್ರಧಾನ ಮಂತ್ರಿಯವರು ಕೇರಳಕ್ಕೆ ಆಗಮಿಸುತ್ತಿರುವುದು ನೇತಾರರಲ್ಲಿ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.
ಫೆ.14ರಂದು ಕೊಚ್ಚಿಯಲ್ಲಿ ನಡೆಯಲಿರುವ ಬಿಜೆಪಿಯ ಕೋರ್ ಸಮಿತಿಯ ಸಭೆಯಲ್ಲಿ ಎಲ್ಲ ಸದಸ್ಯರು ಭಾಗವಹಿಸಬೇಕೆಂದು ಪಕ್ಷವು ತಿಳಿಸಿದೆ. ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಸಚಿವ ವಿ.ಮುರಳೀಧರನ್, ಶಾಸಕ ಓ.ರಾಜಗೋಪಾಲ್, ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ರಾಜ್ಯದ ಮಾಜಿ ಅಧ್ಯಕ್ಷರು ಮುಂತಾದವರು ಕೋರ್ ಸಮಿತಿಯ ಪ್ರತಿನಿಧಿಗಳಾಗಿರುತ್ತಾರೆ. ಜತೆಗೆ ರಾಷ್ಟ್ರೀಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು.
ಇದನ್ನೂ ಓದಿ:ವಿಧಾನಸಭಾ ಚುನಾವಣೆಗೆ ಸಿದ್ಧತೆ : ನಾಳೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ
ಫೆ.14ರಂದು ಅಪರಾಹ್ನ 2.45ಕ್ಕೆ ಕೊಚ್ಚಿಗೆ ತಲುಪಲಿರುವ ಪ್ರಧಾನಮಂತ್ರಿಯವರು 3.30ರಿಂದ 4.30ರ ವರೆಗೆ ಅಂಬಲಕ್ಕಾಟ್ ಶಾಲಾ ಮೈದಾನದಲ್ಲಿ ನಡೆಯುವ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ವಿವಿಧ ಯೋಜನೆಗಳನ್ನು ಉದ್ಘಾಟಿಸುವರು. ಅನಂತರ ಅವರು ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಸಂಜೆ 5.55ಕ್ಕೆ ಹೊಸದಿಲ್ಲಿಗೆ ಹಿಂತಿರುಗುವರು.
ಈ ಮಧ್ಯೆ ಪಕ್ಷದ ಹಿರಿಯ ನೇತಾರರನ್ನು ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಸಕ್ರಿಯರಾಗಿ ಪ್ರಚಾರ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ವಿಜಯ ಯಾತ್ರೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೆ.21ರಂದು ಕಾಸರಗೋಡಿನಲ್ಲಿ ಉದ್ಘಾಟಿಸುವರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಮಂದಿ ನೇತಾರರು ಮುಂದಿನ ದಿನಗಳಲ್ಲಿ ಕೇರಳಕ್ಕೆ ಆಗಮಿಸಲಿದ್ದಾರೆ.