Advertisement

ರೈತರ ಜತೆ ಮಾತುಕತೆಗೆ ಸಿದ್ಧ ಎಂದ ಪ್ರಧಾನಿ ಮೋದಿ : ಸರ್ವ ಪಕ್ಷಗಳ ಸಭೆಯಲ್ಲಿ ಭರವಸೆ

02:06 AM Jan 31, 2021 | Team Udayavani |

ಹೊಸದಿಲ್ಲಿ: ರೈತರ ಪ್ರತಿಭಟನೆ ಬಲವಾಗಿರುವಂತೆಯೇ ಕೃಷಿ ಕಾಯ್ದೆಗಳನ್ನು 18 ತಿಂಗಳುಗಳ ಕಾಲ ಅಮಾನತಿನಲ್ಲಿ ಇರಿಸುವ ನಿರ್ಧಾರಕ್ಕೆ ಈಗಲೂ ಬದ್ಧವಾಗಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

Advertisement

ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಈ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ವಿಪಕ್ಷಗಳ ನಾಯಕರೂ ರೈತರ ಪ್ರತಿಭಟನೆ ಬಗ್ಗೆ ಪ್ರಧಾನಿಯವರ ಗಮನ ಸೆಳೆದರು. ಈಗಲೂ ಇಡೀ ಸಮಸ್ಯೆ “ಒಂದೇ ಒಂದು ದೂರವಾಣಿ ಕರೆ’ಯಲ್ಲಿ ನಿಂತಿದೆ. ಜ. 22ರಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರೈತರಿಗೆ ನೀಡಿರುವ ಭರವಸೆಗೆ ಈಗಲೂ ಬದ್ಧರಾಗಿದ್ದೇವೆ. ಅಂದಿನ ಕೃಷಿ ಸಚಿವರ ಪ್ರಸ್ತಾವಕ್ಕೆ ರೈತರು ಒಪ್ಪಿ ಮಾತುಕತೆಗೆ ಬಂದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಮೋದಿ ಪುನರುಚ್ಚರಿಸಿದ್ದಾರೆ.

ಗದ್ದಲ, ಗಲಾಟೆ ಇಲ್ಲದೇ ಬಜೆಟ್‌ ಅಧಿವೇಶನ ನಡೆಯಬೇಕು ಎಂದು ಹೇಳಿದ ಮೋದಿ, ಇದಕ್ಕಾಗಿ ವಿಪಕ್ಷಗಳ ಸಹಕಾರ ಕೋರಿದರು. ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಟಿಎಂಸಿಯ ಸುದೀಪ್‌ ಬಂದೋಪಾಧ್ಯಾಯ, ಶಿವಸೇನೆಯ ವಿನಾಯಕ ರಾವತ್‌ ರೈತರ ಪ್ರತಿಭಟನೆ ಬಗ್ಗೆ ಗಮನ ಸೆಳೆದರು.

ರೈತರಿಂದ ಉಪವಾಸ
ಕೃಷಿ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಶನಿವಾರ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಸದ್ಭಾವನಾ ದಿನ ಆಚರಿಸಿದರು. ಈ ಮಧ್ಯೆ ರೈತ ನಾಯಕ ರಾಕೇಶ್‌ ಟಿಕಾಯತ್‌ ಕಣ್ಣೀರು ರೈತರನ್ನು ಮತ್ತೆ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಭಟನ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದಾರೆ.

ಕೆಂಪುಕೋಟೆ ಗಲಭೆ ಬಗ್ಗೆ ಕಿಡಿ
ಸರ್ವಪಕ್ಷಗಳ ಸಭೆಯಲ್ಲಿ ದಿಲ್ಲಿಯ ಕೆಂಪುಕೋಟೆ ಬಳಿ ನಡೆದ ಗಲಭೆ ಬಗ್ಗೆಯೂ ಪ್ರಸ್ತಾವವಾಯಿತು. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮೋದಿ ಹೇಳಿದರು. ಇತರ ನಾಯಕರೂ ಗಲಭೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹೊರಗಿನ ಶಕ್ತಿಗಳು ಪ್ರತಿಭಟನೆಯಲ್ಲಿ ನುಸುಳಿದ್ದು ಹೇಗೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ವಿಪಕ್ಷಗಳ ನಾಯಕರು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next