ನವದೆಹಲಿ: ನೂತನ ಸಂಸತ್ ಭವನ ಲೋಕಾರ್ಪಣೆಗೊಂಡ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 101ನೇ ಆವೃತ್ತಿಯ ಮೂಲಕ ದೇಶವಾಸಿಗಳೊಂದಿಗೆ ಮಾತನಾಡಿದ್ದಾರೆ.
ಭಾನುವಾರವೇ ಹಿಂದುತ್ವ ಸಿದ್ಧಾಂತವಾದಿ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ಜನ್ಮದಿನವೂ ಆಗಿದ್ದ ಕಾರಣ, ಅವರಿಗೆ ಮೋದಿ ಗೌರವ ನಮನವನ್ನೂ ಸಲ್ಲಿಸಿದ್ದಾರೆ. ಅಲ್ಲದೇ, ಹಲವು ಎಲೆಮರೆಯ ಕಾಯಿಗಳ ಯಶೋಗಾಥೆ, ದೇಶದ ಪ್ರಮುಖ ಮ್ಯೂಸಿಯಂಗಳು, ಯುವಸಂಗಮ, ಕಾಶಿ-ತೆಲುಗು ಸಂಗಮಮ್, ತಮ್ಮ ಇತ್ತೀಚೆಗಿನ ಜಪಾನ್ ಭೇಟಿ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರದ ನಿವೃತ್ತ ಯೋಧರೊಬ್ಬರ ಯಶೋಗಾಥೆಯನ್ನು ಮೋದಿಯವರು ಶ್ರೋತೃಗಳ ಮುಂದೆ ತೆರೆದಿಟ್ಟಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಣ್ಣ ಗ್ರಾಮವೊಂದರ ಮಾಜಿ ಸೈನಿಕ ಶಿವಾಜಿ ಶಾಮರಾವ್ ದೋಲೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ಸೇನೆಯಿಂದ ನಿವೃತ್ತರಾದ ಬಳಿಕ ಶಿವಾಜಿ ಅವರು ಕೃಷಿಯಲ್ಲಿ ಡಿಪ್ಲೋಮಾ ಮಾಡಿದರು. ಈ ಮೂಲಕ ಜೈ ಜವಾನ್‌ನಿಂದ ಜೈ ಕಿಸಾನ್ ಕಡೆಗೆ ಹೆಜ್ಜೆ ಹಾಕಿದರು. ನಂತರದಲ್ಲಿ ಅವರು 20 ಜನರ ತಂಡ ಕಟ್ಟಿ, ಅದಕ್ಕೆ ಮಾಜಿ ಸೈನಿಕರನ್ನೂ ಸೇರಿಸಿದರು. ವೆಂಕಟೇಶ್ವರ ಕೋಆಪರೇಟಿವ್ ಪವರ್ ಮತ್ತು ಅಗ್ರೋ ಪ್ರೊಸೆಸಿಂಗ್ ಲಿ. ಎಂಬ ಸಹಕಾರ ಸಂಸ್ಥೆಯನ್ನೂ ಕಟ್ಟಿದರು. ಇಂದು ಈ ವೆಂಕಟೇಶ್ವರ ಕೋ ಆಪರೇಟಿವ್ ಸಂಸ್ಥೆಯು ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. 18 ಸಾವಿರದಷ್ಟು ಜನರು ಈ ಸಂಸ್ಥೆಯೊಂದಿಗೆ ನಂಟು ಹೊಂದಿದ್ದು, ಈ ತಂಡದ ಸದಸ್ಯರು ಕೃಷಿ, ಕೆರೆಗಳ ಪುನರುಜ್ಜೀವನ, ಸಾವಯವ ಕೃಷಿ, ಡೇರಿ ಉತ್ಪನ್ನಗಳ ಉತ್ಪಾದನೆಯನ್ನೂ ಆರಂಭಿಸಿದರು ಎಂದು ಪ್ರಧಾನಿ ಹೇಳಿದರು.
ಎನ್‌ಟಿಆರ್ ನೆನಪು: ತೆಲುಗು ಚಿತ್ರರಂಗದ ಟಾಪ್ ನಟ ಎನ್‌ಟಿಆರ್ ಅವರ 100ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕುರಿತೂ ಪ್ರಸ್ತಾಪಿಸಿದ ಮೋದಿ, ತಮ್ಮ ಬಹುಮುಖ ಪ್ರತಿಭೆಯ ಸಾಮರ್ಥ್ಯದೊಂದಿಗೆ ಎನ್‌ಟಿಆರ್ ಅವರು ಕೇವಲ ತೆಲುಗು ಸಿನಿಮಾದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದು ಮಾತ್ರವಲ್ಲ, ಕೋಟ್ಯಂತರ ಜನರ ಹೃದಯವನ್ನೂ ಗೆದ್ದಿದ್ದಾರೆ. ಅವರಿಗೆ ನಮನಗಳು ಎಂದಿದ್ದಾರೆ.
ಸ್ವಾಭಿಮಾನದ ಪ್ರತೀಕ
ತಮ್ಮ ಮನ್ ಕಿ ಬಾತ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, “ಸಾವರ್ಕರ್ ಅವರ ವ್ಯಕ್ತಿತ್ವದಲ್ಲೇ ವಿಶಿಷ್ಟವಾದ ಶಕ್ತಿಯಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಸಹಿಸುತ್ತಿರಲಿಲ್ಲ’ ಎಂದು ಶ್ಲಾ ಸಿದರು. ಸಾವರ್ಕರ್ ಅವರ ಜನ್ಮದಿನವಾದ ಇಂದು ಅವರಿಗೆ ಗೌರವ ನಮನವನ್ನು ಅರ್ಪಿಸುತ್ತೇನೆ ಎಂದರು.