ಹಿರೋಶಿಮಾ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕ್ವಾಡ್, ಜಿ7 ಶೃಂಗದಲ್ಲಿ ಭಾಗಿಯಾಗುವುದರ ಜತೆಗೆ, ವಿಶ್ವನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕ್ವಾಡ್ ಶೃಂಗದ ಉದ್ಘಾಟನ ಸಭೆಯಲ್ಲಿ ಮಾತನಾಡಿದ ಅವರು, “ಇಂಡೋ-ಪೆಸಿಫಿಕ್ ಪ್ರದೇಶವು ಜಾಗತಿಕ ವ್ಯಾಪಾರ, ನಾವೀನ್ಯ ಮತ್ತು ಅಭಿವೃದ್ಧಿಯ ಎಂಜಿನ್ ಆಗಿದ್ದು, ಈ ಪ್ರದೇಶದ ಯಶಸ್ಸು ಮತ್ತು ಭದ್ರತೆಯು ಇಡೀ ಜಗತ್ತಿಗೇ ಮಹತ್ವವಾದದ್ದು’ ಎಂದು ಹೇಳಿದರು.
ಇದೇ ವೇಳೆ, “ಭಾರತವು ತನ್ನ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಿಕೊಳ್ಳಲು ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ನೌಕಾ ವಿವಾದಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲಾಗುತ್ತದೆ’ ಎನ್ನುವ ಮೂಲಕ ವಿಸ್ತರಣಾವಾದವನ್ನು ನೆಚ್ಚಿಕೊಂಡಿರುವ ಚೀನಕ್ಕೆ ಪರೋಕ್ಷ ಸಂದೇಶ ರವಾನಿಸಿದರು.
2024ರ ಕ್ವಾಡ್ ಶೃಂಗದ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ ಎಂದೂ ಮೋದಿ ತಿಳಿಸಿದರು. ಇದೇ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನೂ ಭೇಟಿಯಾದ ಮೋದಿ, “ಯುದ್ಧವು ಅತ್ಯಂತ ಗಂಭೀರ ವಿಚಾರ. ಈ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಏನೇನು ಬೇಕೋ ಅದನ್ನು ನಾವು ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಹಿರೋಶಿಮಾದಲ್ಲಿ ಮಹಾತ್ಮಾ ಗಾಂಧಿಯ ಪುತ್ಥಳಿಯನ್ನೂ ಅನಾವರಣಗೊಳಿಸಿದರು.
ಹಸ್ತಲಾಘವ-ಆಲಿಂಗನ
ಪ್ರಧಾನಿ ಮೋದಿ ಅವರನ್ನು ಕಾಣುತ್ತಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಧಾವಿಸಿ ಬಂದು ಆಲಿಂಗಿಸಿಕೊಂಡರು. ಅನಂ ತರ ಪರಸ್ಪರ ಹಸ್ತಲಾಘವ ಮಾಡಿಕೊಂಡ ನಾಯಕರು, ಕುಶಲೋಪರಿ ವಿಚಾರಿಸಿಕೊಂಡರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.