Advertisement

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ಪ್ರಧಾನಿ ಮೋದಿಯಿಂದ ಸಿಎಂ KCR ಗೆ ಎಚ್ಚರಿಕೆ

09:11 PM Apr 08, 2023 | Team Udayavani |

ಹೈದರಾಬಾದ್‌/ಚೆನ್ನೈ: “ರಾಜಕೀಯ ವಿಚಾರಗಳು ಏನೇ ಇರಬಹುದು. ಆದರೆ ಅಭಿವೃದ್ಧಿ ವಿಚಾರದಲ್ಲಿ ಅಡ್ಡಿ ಮಾಡಬೇಡಿ’- ಹೀಗೆಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರನ್ನು ತರಾಟೆಗೆ ತೆಗೆದುಕೊಂಡದ್ದು ಪ್ರಧಾನಿ ನರೇಂದ್ರ ಮೋದಿ. ಗಮನಾರ್ಹ ಸಂಗತಿಯೆಂದರೆ ತೆಲಂಗಾಣದಲ್ಲಿ ಆಯೋಜಿಸಲಾಗಿದ್ದ ಯಾವುದೇ ಕಾರ್ಯಕ್ರಮಗಳಿಗೆ ಕೆ.ಚಂದ್ರಶೇಖರ ರಾವ್‌ ಗೈರು ಹಾಜರಾಗಿದ್ದರು.

Advertisement

ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ 11,300 ಕೋಟಿ ರೂ. ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. “ಕೇಂದ್ರ ಸರ್ಕಾರದ ವತಿಯಿಂದ ತೆಲಂಗಾಣದ ಜನರಿಗಾಗಿ ಹಲವು ಅಭಿವೃದ್ಧಿ ಯೋಜನೆಗಳ ಜಾರಿಗೆ ಮುಂದಾಗಿದೆ. ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರೀಯ ಸಮಿತಿ ಸರ್ಕಾರ ಅದಕ್ಕೆ ಅಡ್ಡಿ ಮಾಡುತ್ತಿದೆ. ಕೇಂದ್ರದ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿದೆ. ಜತೆಗೆ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ.’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಪ್ರಧಾನಿಯವರ ಈ ಭೇಟಿ ಮಹತ್ವ ಪಡೆದಿದೆ. “ರಾಜ್ಯ ಸರ್ಕಾರ ಹೊಂದಿರುವ ನಿಲುವಿನಿಂದ ನನಗೆ ನೋವಾಗಿದೆ. ಕೇಂದ್ರದ ಯೋಜನೆಗೆ ತಡೆಯೊಡ್ಡುವುದರಿಂದ ರಾಜ್ಯದ ಜನರ ಕನಸುಗಳಿಗೆ ತಡೆಯೊಡ್ಡಿದಂತಾಗುತ್ತದೆ. ಹೀಗಾಗಿ, ರಾಜಕೀಯ ವಿಚಾರಗಳು ಏನೇ ಇದ್ದರೂ, ಅಭಿವೃದ್ಧಿಯ ವಿಚಾರದಲ್ಲಿ ಅಡ್ಡಿ ಮಾಡುವುದು ಬೇಡ’ ಎಂದರು.

ಎರಡೂ ಒಂದೇ: ಕೌಟುಂಬಿಕ ರಾಜಕೀಯ ವ್ಯವಸ್ಥೆಗೆ ಪ್ರೋತ್ಸಾಹ ಮತ್ತು ಭ್ರಷ್ಟಾಚಾರ ಎರಡೂ ಒಂದೇ ಎಂದು ಪ್ರತಿಪಾದಿಸಿದ ನರೇಂದ್ರ ಮೋದಿ, ಕೆಲವರು ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕೆ.ಚಂದ್ರಶೇಖರ ರಾವ್‌ ಮತ್ತು ಅವರ ಕುಟುಂಬ ಸದಸ್ಯರನ್ನು ಪರೋಕ್ಷವಾಗಿ ಉಲ್ಲೇಖೀಸಿ ಮಾತನಾಡಿದರು. ಕೌಟುಂಬಿಕ ರಾಜಕೀಯ ವ್ಯವಸ್ಥೆಯಿಂದಾಗಿ ಬಡವರಿಗೆ ನೀಡಲಾಗುತ್ತಿದ್ದ ಪಡಿತರ ವ್ಯವಸ್ಥೆ ಕೂಡ ಲೂಟಿಯಾಗುತ್ತಿದೆ. ಒಂದೇ ಕುಟುಂಬದ ವ್ಯವಸ್ಥೆಯಲ್ಲಿ ಅದಕ್ಕೆ ಸಂಬಂಧಿಸಿದವರು ಮಾತ್ರ ಬೆಳವಣಿಗೆ ಹೊಂದುತ್ತಾರೆ ಎಂದರು.
ಸುಪ್ರೀಂ ತಪರಾಕಿ: ಪ್ರತಿಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸುತ್ತಿವೆ. ಜತೆಗೆ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದವು. ಆ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಸುಪ್ರೀಂಕೋರ್ಟ್‌ ಅವುಗಳಿಗೆ ಸೂಕ್ತ ಪಾಠ ಕಲಿಸಿದೆ ಎಂದು ಮೋದಿ ಛೇಡಿಸಿದ್ದಾರೆ. ಕೆಲವರು ತಾವು ಮಾಡಿದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡಲೇಬಾರದು ಎಂಬ ಕಾರಣಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ತನಿಖಾ ಸಂಸ್ಥೆಗಳ ದುರುಪಯೋಗದ ಆರೋಪ ಮಾಡಿ ಮೊಕದ್ದಮೆ ಹೂಡಿದ್ದವು ಎಂದರು ಪ್ರಧಾನಿ.

ಚೆನ್ನೈನಲ್ಲಿ 1250 ಕೋ.ರೂ. ವೆಚ್ಚದ ಟರ್ಮಿನಲ್‌ ಉದ್ಘಾಟನೆ
ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಏಕೀಕೃತ ಟರ್ಮಿನಲ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದರಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರ್ಷಿಕವಾಗಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 2.3 ಕೋಟಿಯಿಂದ 3 ಕೋಟಿಗೇರಲಿದೆ. ವಲಸೆ ನಿರ್ವಹಣೆ ಕೌಂಟರ್‌ಗಳು, ಚೆಕ್‌ ಇನ್‌ ಕೌಂಟರ್‌ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಲಿದೆ.

Advertisement

ಸಿಕಂದರಾಬಾದ್‌-ತಿರುಪತಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ
ಸಿಕಂದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಇದರಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಮೂರೂವರೆ ಗಂಟೆಗಳ ಕಾಲ ಇಳಿಕೆಯಾಗಿದೆ. ಅವರು ಕೊಂಚ ದೂರ ರೈಲಿನಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಜ.15ರಂದು ವಿಶಾಖಪಟ್ಟಣದಿಂದ ಸಿಕಂದರಾಬಾದ್‌ಗೆ ವಂದೇಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಲೋಕಾರ್ಪಣೆಗೊಳಿಸಿದ್ದರು. ಇದೇ ವೇಳೆ ತಮಿಳುನಾಡಿನ ಚೆನ್ನೈ ಭೇಟಿಯ ವೇಳೆ ಕೊಯಮತ್ತೂರಿಗೆ ತೆರಳುವ ಮತ್ತೂಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ರೈಲು ಉದ್ಘಾಟನೆಯ ಮೂಲಕ ದೇಶದಲ್ಲಿ ಹದಿಮೂರನೇ ವಂದೇ ಭಾರತ್‌ ರೈಲು ಸೇವೆಗೆ ಲಭ್ಯವಾದಂತೆ ಆಗಿದೆ.

ದೆಹಲಿ-ಡೆಹರಾಡೂನ್‌ ನಡುವೆ ಎರಡೇ ಗಂಟೆ ಪ್ರಯಾಣ!
ನವದೆಹಲಿಯಿಂದ ಡೆಹ್ರಾಡೂನ್‌ಗೆ ಶೀಘ್ರದಲ್ಲಿಯೇ ಎರಡೂವರೆ ಗಂಟೆಯಲ್ಲಿ ತಲುಪಲು ಸಾಧ್ಯವಿದೆ. 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಹೆದ್ದಾರಿಯ ಕಾಮಗಾರಿ ವರ್ಷಾಂತ್ಯಕ್ಕೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದೇ ರಸ್ತೆಯಿಂದಾಗಿ ಹರಿದ್ವಾರಕ್ಕೆ ನವದೆಹಲಿಯಿಂದ 90 ನಿಮಿಷದಲ್ಲಿ ತಲುಪಲೂ ಸಾಧ್ಯವಾಗಲಿದೆ ಎಂದಿದ್ದಾರೆ. ಈ ಮಾಹಿತಿಯನ್ನು ಐದನೇ ಆವೃತ್ತಿಯ “ಅಯೋಧ್ಯೆ ಪರ್ವ’ ಕಾರ್ಯಕ್ರಮದಲ್ಲಿ ನೀಡಿದರು.

ಮೋದಿ- ಸ್ಟಾಲಿನ್‌ ನಡುವೆ ಕೂಲ್‌ ಕೂಲ್‌
ತೆಲಂಗಾಣದಲ್ಲಿ ಸಿಎಂ ಚಂದ್ರಶೇಖರ ರಾವ್‌ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸಿಎಂ ಎಂ.ಕೆ.ಸ್ಟಾಲಿನ್‌ ಜತೆಗೆ ಮುಕ್ತವಾಗಿ ಮಾತುಕತೆ ನಡೆಸಿದರು. ಚೆನ್ನೈ ವಿಮಾನ ನಿಲ್ದಾಣದ ಏಕೀಕೃತ ಟರ್ಮಿನಲ್‌ ಉದ್ಘಾಟನೆಯ ಕಾರ್ಯಕ್ರಮದ ವೇಳೆ ಇಬ್ಬರು ನಾಯಕರು ಉಭಯ ಕುಶಲೋಪರಿ ನಡೆಸಿದರು. ವಿಮಾನ ನಿಲ್ದಾಣದಲ್ಲಿ ಖುದ್ದು ಸ್ಟಾಲಿನ್‌ ಅವರೇ ಪ್ರಧಾನಿಯವರನ್ನು ಬರಮಾಡಿಕೊಂಡರು. ಒಟ್ಟು ಮೂರು ಕಾರ್ಯಕ್ರಮಗಳ ಪೈಕಿ ಎರಡರಲ್ಲಿ ಸಿಎಂ ಸ್ಟಾಲಿನ್‌ ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಡಿಎಂಕೆ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next