ನವದೆಹಲಿ : “ಕೇವಲ 9 ತಿಂಗಳ ಅವಧಿಯಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲು ಸಾಧ್ಯವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ.’
ಭಾರತದ ಕೊರೊನಾ ಲಸಿಕೆ ಉತ್ಪಾದಕ ಕಂಪನಿಗಳ ಅಭಿಪ್ರಾಯವಿದು. ಶನಿವಾರ 7 ಲಸಿಕೆ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ಮೋದಿ ನಡೆಸಿದ ಸಂವಾದದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
100 ಕೋಟಿ ಡೋಸ್ ಸಾಧನೆ ಹಿನ್ನೆಲೆಯಲ್ಲಿ ಮೋದಿ, ದೇಶದ ಲಸಿಕೆ ಉತ್ಪಾದಕ ಕಂಪನಿಗಳಾದ ಸೀರಂ ಇನ್‌ಸ್ಟಿಟ್ಯೂಟ್, ಭಾರತ್ ಬಯೋಟೆಕ್, ಡಾ. ರೆಡ್ಡೀಸ್ ಲ್ಯಾಬೊರೆಟರೀಸ್, ಝೈಡಸ್ ಕ್ಯಾಡಿಲಾ, ಬಯಾಲಾಜಿಕಲ್ ಇ, ಜೆನ್ನೋವಾ ಬಯೋಫಾರ್ಮಾ ಮತ್ತು ಪನೇಶಿಯಾ ಬಯೋಟೆಕ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಲಸಿಕೆ ಸಂಶೋಧನೆಯನ್ನು ಮುಂದುವರಿಸುವುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಪೂನಾವಾಲ ಶ್ಲಾಘನೆ:
ಲಸಿಕೆ ಮೈಲುಗಲ್ಲು ಸಾಧಿಸುವಲ್ಲಿ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಕೊಂಡಾಡಿದ ಸೀರಂ ಇನ್‌ಸ್ಟಿಟ್ಯೂಟ್ ಸಿಇಒ ಅಡಾರ್ ಪೂನಾವಾಲ, “ಜಗತ್ತಿನಾದ್ಯಂತ ಎಲ್ಲ ದೇಶಗಳೂ ಈಗ ಲಸಿಕೆ ಉತ್ಪಾದನೆ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. ಭಾರತ ಕೂಡ ಆ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ನಮ್ಮ ಈ ಕ್ಷೇತ್ರ ಮತ್ತು ಸರ್ಕಾರ ಜತೆಗೂಡಿ ಹೇಗೆ ಇದನ್ನು ಸಾಧ್ಯವಾಗಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದಿದ್ದಾರೆ. ಅಡಾರ್ ಅವರ ತಂದೆ ಸೈರಸ್ ಪೂನಾವಾಲ ಮಾತನಾಡಿ, “ಮೋದಿಯವರಿಲ್ಲದಿದ್ದರೆ ಭಾರತ ಇಂದು ಶತಕೋಟಿ ಡೋಸ್‌ಗಳ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು
ಮೋದಿ ಬದ್ಧತೆಯೇ ಕಾರಣ:
100 ಕೋಟಿ ಡೋಸ್‌ನ ದಾಖಲೆ ಮಾಡುವುದು ಸುಲಭದ ಕೆಲಸವಲ್ಲ. ಇದು ಆತ್ಮನಿರ್ಭರ ಭಾರತದ ಯಶೋಗಾಥೆ. ಪ್ರಧಾನಿ ಮೋದಿ ಅವರ ಬದ್ಧತೆಯಿಂದ ಇದು ಸಾಧ್ಯವಾಯಿತು. ಆರಂಭದಲ್ಲಿದ್ದ ಎಲ್ಲ ಋಣಾತ್ಮಕತೆಗಳೂ ನಂತರದಲ್ಲಿ ಅವಕಾಶವಾಗಿ ಪರಿವರ್ತನೆಗೊಂಡವು. ಯಾವುದೇ ದೇಶಕ್ಕೆ ಒಬ್ಬ ನಾಯಕನು ಮಾಡಬಹುದಾದ ಶ್ರೇಷ್ಠ ಕೆಲಸವಿದು ಎಂದು ಭಾರತ್ ಬಯೋಟೆಕ್ ಸ್ಥಾಪಕ ಕೃಷ್ಣ ಎಲ್ಲಾ ಹೇಳಿದ್ದಾರೆ.