Advertisement

ಜೈಲಲ್ಲಿದ್ದಾರೆ ಮಾಫಿಯಾ, ಗ್ಯಾಂಗ್‌ಸ್ಟರ್‌ಗಳು : ಎಸ್‌ಪಿಗೆ ಪ್ರಧಾನಿ ಮೋದಿ ಲೇವಡಿ

08:17 PM Sep 14, 2021 | Team Udayavani |

ಅಲಿಗಡ : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿ ಬದಲಾವಣೆಯಾಗಿದೆ. 2017ಕ್ಕಿಂತ ಮೊದಲು ರಾಜ್ಯದಲ್ಲಿ ಮಾಫಿಯಾಗಳು, ಗ್ಯಾಂಗ್‌ಸ್ಟರ್‌ಗಳ ಅಬ್ಬರ ಹೆಚ್ಚಾಗಿತ್ತು. ಆ ಕೂಟದ ಮುಖಂಡರೆಲ್ಲ ಜೈಲಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಆ ಸಂದರ್ಭದಲ್ಲಿ ಅಧಿಕಾರದಲ್ಲಿ ಇದ್ದ ಸಮಾಜವಾದಿ ಪಕ್ಷದ ಸರ್ಕಾರಕ್ಕೆ ಟಾಂಗ್‌ ನೀಡಿದ್ದಾರೆ.

Advertisement

ಉತ್ತರ ಪ್ರದೇಶದ ಅಲಿಗಡದ ಲೋಧಾ ಪಟ್ಟಣದಲ್ಲಿ ಮಂಗಳವಾರ ರಾಜಾ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಿನಲ್ಲಿ ನಿರ್ಮಾಣವಾಗಲಿರುವ ವಿಶ್ವವಿದ್ಯಾನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜಾಟ್‌ ಸಮುದಾಯದ ಪ್ರಧಾನ ನಾಯಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ರಾಜಾ ಮಹೇಂದ್ರ ಪ್ರತಾಪ್‌ ಸಿಂಗ್‌. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಶಿಲಾನ್ಯಾಸ ಮಹತ್ವ ಪಡೆದಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿರುವ ಅಲಿಗಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೇ.17 ಮಂದಿ ಜಾಟ್‌ ಸಮುದಾಯದವರಿದ್ದಾರೆ. ಹೀಗಾಗಿ, ಯಾವುದೇ ಪಕ್ಷಕ್ಕೆ ಅವರ ಮತಗಳು ಪ್ರಧಾನ ಭೂಮಿಕೆ ವಹಿಸಲಿವೆ.

ಡಬಲ್‌ ಲಾಭ:
ಸಿಎಂ ಯೋಗಿ ಆದಿತ್ಯನಾಥ್‌ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿ ಸಿದ ಪ್ರಧಾನಿ, “ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇವೆ. ಇದರಿಂದಾಗಿ ಡಬಲ್‌ ಎಂಜಿನ್‌ ಸರ್ಕಾರ ಇದೆ. ಈ ವ್ಯವಸ್ಥೆಯಿಂದಾಗಿ ರಾಜ್ಯದ ಡಬಲ್‌ ಲಾಭಗಳಾಗಿವೆ. ಹೀಗಾಗಿ, ಉತ್ತರ ಪ್ರದೇಶ ಸರ್ಕಾರ ಡಬಲ್‌ ಎಂಜಿನ್‌ ಸರ್ಕಾರ ಹೇಗೆ ಇರಬೇಕು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ’ ಎಂದರು.

ಕಲ್ಯಾಣ್‌ ಸಿಂಗ್‌ ನೆನೆಕೆ:
ಇತ್ತೀಚೆಗೆ ನಿಧನರಾದ ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ದಿ.ಕಲ್ಯಾಣ್‌ ಸಿಂಗ್‌ ಅವರನ್ನು ಪ್ರಧಾನಿ ನೆನಪು ಮಾಡಿಕೊಂಡರು. ರಾಜಾ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಿನ ವಿವಿ ಸ್ಥಾಪನೆ ಆಗಿರುವ ಬಗ್ಗೆ ಕಲ್ಯಾಣ್‌ ಸಿಂಗ್‌ ಇದ್ದಿದ್ದರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದರು ಪ್ರಧಾನಿ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಡವರಿಗಾಗಿ ಅಭಿವೃದ್ಧಿ ಯೋಜನೆಗಳು ಸಿದ್ಧಗೊಂಡಿದ್ದರೂ, ಅನುಷ್ಠಾನಕ್ಕೆ ಹಲವು ತಡೆಗಳಿದ್ದವು. ಅಂಥ ಪರಿಸ್ಥಿತಿ ಈಗ ನಿವಾರಣೆಯಾಗಿದೆ ಎಂದು ಪ್ರಧಾನಿ ಕೊಂಡಾಡಿದರು.

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ
ಮನೆಗಳಿಗೆ ಬೀಗದ ಮೂಲಕ ರಕ್ಷಣೆ ನೀಡುವುದರಿಂದ ದೇಶದ ಗಡಿಗಳನ್ನು ಕಾಯುವ ವರೆಗೆ ಅಲಿಗಡ ಹಲವು ಕೊಡುಗೆಗೊಳನ್ನು ನೀಡಿದೆ ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. 21ನೇ ಶತಮಾನದಲ್ಲಿ ಅಲಿಗಡ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ವಿಶೇಷ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನೆಗೆ ಸಂಬಂಧಿಸಿದಂತೆ ದೇಶ ಸ್ವಾವಲಂಬನೆಯತ್ತ ಸಾಗಲಿದೆ. ಅದಕ್ಕೆ ಉತ್ತರ ಪ್ರದೇಶವೇ ಪ್ರಧಾನ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಶಸ್ತ್ರಾಸ್ತ್ರಗಳನ್ನು, ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಲಿಗಡವನ್ನು ಕೇಂದ್ರವನ್ನಾಗಿಸಿಕೊಂಡು ರಕ್ಷಣಾ ಉತ್ಪಾದನಾ ಕಾರಿಡಾರ್‌ ಸ್ಥಾಪನೆಯಿಂದ ಇದು ಸಾಧ್ಯವಾಗಲಿದೆ ಎಂದರು. ಸಣ್ಣ ಪ್ರಮಾಣ ಶಸ್ತ್ರಾಸ್ತ್ರಗಳು, ಡ್ರೋನ್‌, ಲೋಹದ ವಸ್ತುಗಳು, ಡ್ರೋನ್‌ ಪ್ರತಿಬಂಧಕ ವಸ್ತುಗಳು, ರಕ್ಷಣಾ ವಸ್ತುಗಳನ್ನು ಪ್ಯಾಕ್‌ ಮಾಡುವ ವಸ್ತುಗಳು ಈ ಕಾರಿಡಾರ್‌ನಲ್ಲಿ ಉತ್ಪಾದನೆಯಾಗಲಿವೆ.

Advertisement

ಇದೇ ಸಂದರ್ಭದಲ್ಲಿ ಬಾಲ್ಯದಲ್ಲಿ ತಮಗೆ ಮತ್ತು ಅಲಿಗಡಕ್ಕೆ ಇದ್ದ ಬಾಂಧವ್ಯವನ್ನು ಪ್ರಧಾನಿ ನೆನಪಿಸಿಕೊಂಡರು. “55ರಿಂದ 60 ವರ್ಷಗಳ ಹಿಂದೆ ಅಲಿಗಡದ ಬೀಗ ಮಾರಾಟ ಮಾಡುವ ವ್ಯಕ್ತಿ ನಾನು ಹುಟ್ಟಿದ ಗ್ರಾಮಕ್ಕೆ ಬರುತ್ತಿದ್ದರು. ಅವರು ಕಪ್ಪು ಜಾಕೆಟ್‌ ಧರಿಸುತ್ತಿದ್ದ ಅವರು 4-6 ದಿನಗಳ ಕಾಲ ವಾಸ್ತವ್ಯ ಹೂಡುತ್ತಿದ್ದರು’ ಎಂದು ನೆನಪಿಸಿಕೊಂಡರು.

ಪ್ರಧಾನಿಯವರು 2017ಕ್ಕಿಂತ ಮೊದಲು ಉ.ಪ್ರ.ದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್‌ಗಳ ಪ್ರಭಾವ ಹೆಚ್ಚಿತ್ತು. ಅದು ಈಗ ನಿಯಂತ್ರಣದಲ್ಲಿದೆ ಎಂದಿದ್ದಾರೆ. ರಾಜ್ಯ ಮತ್ತು ಕೇಂದ್ರದ ಗೃಹ ಇಲಾಖೆಗಳಲ್ಲಿನ ಮಾಹಿತಿ ಶೋಧಿಸಿ ಅವರು ಮಾತನಾಡಲಿ.
– ಅಖೀಲೇಶ್‌ ಯಾದವ್‌, ಎಸ್‌ಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next