Advertisement

ಕೃಷಿ ಜಮೀನು ಕುಸಿತ ತಡೆಯೇ ಸವಾಲು : ಪ್ರಧಾನಿ ಮೋದಿ ಆತಂಕ

02:09 AM Aug 16, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೃಷಿ ಪ್ರದೇಶ ಕುಂಠಿತವಾಗುತ್ತಿ ರುವುದು ಸವಾಲಿನ ವಿಚಾರ ಮತ್ತು ಸಣ್ಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ನೆರವು ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೊಸದಿಲ್ಲಿಯ ಕೆಂಪು ಕೋಟೆಯ ಬುರುಜಿನಿಂದ 75ನೇ ಸ್ವಾತಂತ್ರ್ಯ ದಿನ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನಡೆಸಿದ ಬಳಿಕ ಅವರು ಮಾತನಾಡಿದರು.

Advertisement

ದೇಶದ ಕೃಷಿ ಕ್ಷೇತ್ರದಲ್ಲಿ ಸಣ್ಣ ರೈತರು ಶೇ.80ರಷ್ಟು ಇದ್ದಾರೆ. ಅವರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪಾದನೆ ನಡೆಸುವಂತೆ ಅವರಿಗೆ ನೆರವಾಗಬೇಕಾಗಿದೆ. ಸಣ್ಣ ರೈತರು ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ಮತ್ತು ಕುಟುಂಬ ಹೊಂದಿರುವ ಆಸ್ತಿಯಲ್ಲಿ ವಿಭಜನೆಯಾದಂತೆ ಕೃಷಿ ಜಮೀನಿನ ವ್ಯಾಪ್ತಿ ಕಿರಿದಾಗುತ್ತಾ ಬರುತ್ತದೆ. ಇದೊಂದು ಸವಾಲಿನ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಣ್ಣ ರೈತರು ದೇಶದ ಹೆಮ್ಮೆ ಎಂದು ಹೇಳಿದ ಪ್ರಧಾನಿ “ಸಣ್ಣ ರೈತ ದೇಶದ ಗೌರವ ಹೆಚ್ಚಿಸಿದ್ದಾನೆ’ ಎಂದು ಹೇಳಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಸಣ್ಣ ರೈತರನ್ನು ಗುರಿಯಾಗಿಸಿ ಕೊಂಡು ನೀತಿಗಳು ರಚನೆಯಾಗುತ್ತಿರಲಿಲ್ಲ. ಬೆಳೆ ವಿಮೆ ಯೋಜನೆ, ಕನಿಷ್ಠ ಬೆಂಬಲ ಬೆಲೆ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ಹಲವು ಯೋಜನೆಗಳಿಂದ ರೈತರಿಗೆ ಅನುಕೂಲವೇ ಆಗಿದೆ ಎಂದರು.

ಸಾರವರ್ಧಿತ ಅಕ್ಕಿ ಪೂರೈಕೆ
ದೇಶದಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಊಟದ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಾರವರ್ಧಿತ ಅಕ್ಕಿ (ಫೋರ್ಟಿಫೈಡ್‌ ರೈಸ್‌) ನೀಡಲಾಗುತ್ತದೆ. 2024ರ ಒಳಗಾಗಿ ದೇಶದ ಬಡವರಿಗೆ ಇಂಥ ಅಕ್ಕಿಯನ್ನು ನೀಡುವುದರ ಮೂಲಕ ಅಪೌಷ್ಟಿಕತೆ ನಿವಾರಣೆಯತ್ತ ಮಹತ್ವದ ಹೆಜ್ಜೆ ಇರಿಸಲಾಗುತ್ತದೆ. ಅಪೌಷ್ಟಿಕತೆ ದೇಶದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅದನ್ನು ನಿವಾರಿಸಲಾಗುತ್ತದೆ ಎಂದರು.

ಪಾಕ್‌-ಚೀನ ಪ್ರಸ್ತಾವ
ಭಯೋತ್ಪಾದನೆ ಮತ್ತು ವಿಸ್ತರಣಾವಾದದ ಅವಳಿ ಸವಾಲನ್ನು ಭಾರತ ಸಮರ್ಥವಾಗಿ, ದಿಟ್ಟತನದಿಂದ ಎದುರಿಸುತ್ತಿದೆ. ಇದಕ್ಕೆ ಸರ್ಜಿಕಲ್‌ ದಾಳಿ, ಬಾಲ ಕೋಟ್‌ ವೈಮಾನಿಕ ದಾಳಿಯೇ ಸಾಕ್ಷಿ. ನಾವು ನಮ್ಮ ಶತ್ರುಗಳಿಗೆ ಪ್ರಬಲ ಸಂದೇಶ ರವಾನಿಸಿದ್ದೇವೆ. ಭಾರತವು ಈಗ ಬದಲಾಗುತ್ತಿದೆ. ಯಾವುದೇ ಕಠಿನ ನಿರ್ಧಾರ ಕೈಗೊಳ್ಳಲೂ ನಾವು ಹಿಂಜರಿಯುವುದಿಲ್ಲ.

Advertisement

ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಸಿದ್ಧತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿದೆ ಎಂದು ಮೋದಿ ಹೇಳಿದ್ದಾರೆ. ಈಗ ಅಲ್ಲಿ ಅಭಿವೃದ್ಧಿಯು ಗೋಚರಿಸುತ್ತಿದೆ. ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ರಚಿಸಲಾಗಿದ್ದು, ಸದ್ಯದಲ್ಲೇ ಅಲ್ಲಿ ಚುನಾವಣೆ ನಡೆಸಲು ಸಿದ್ಧತೆ ಶುರು ಮಾಡಲಾಗಿದೆ. ಲಡಾಖ್‌ನಲ್ಲೂ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿ ಆಗುತ್ತಿದೆ. ಸಿಂಧು ಕೇಂದ್ರೀಯ ವಿವಿ ಕೂಡ ಲಡಾಖ್‌ ಅನ್ನು ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ಪರಿವರ್ತಿಸಲಿದೆ ಎಂದಿದ್ದಾರೆ.

ನೆಹರು, ಗಾಂಧಿಗೆ ಋಣಿ ಎಂದ ಮೋದಿ!
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸ್ಮರಿಸಿದ್ದಾರೆ. ಮೊದಲ ಪ್ರಧಾನಿ ಜವಹರಲಾಲ್‌ ನೆಹರು, ರಾಷ್ಟ್ರವನ್ನು ಒಗ್ಗೂಡಿಸಿದ ಸರ್ದಾರ್‌ ವಲ್ಲಭಾಯಿ ಪಟೇಲ್‌, ದೇಶಕ್ಕೆ ಭವಿಷ್ಯ ತೋರಿಸಿದ ಬಿ.ಆರ್‌.ಅಂಬೇಡ್ಕರ್‌ ಅವರಿಗೆ ದೇಶ ಋಣಿಯಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಜತೆ ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಸುಭಾಷ್‌ ಚಂದ್ರ ಬೋಸ್‌ ಸೇರಿ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಮೋದಿ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next