Advertisement
ಮೋದಿ ಸರಕಾರ ಎರಡನೇ ಅವಧಿಯ ಆಡಳಿತ ಶುರುವಾಗುತ್ತಿ ರುವಂತೆಯೇ ಕೊರೊನಾ ಅಲೆ ದೇಶಕ್ಕೂ ಕಾಲಿಟ್ಟಿತು. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಕೂಡ ಕರಾಳ ಛಾಯೆ ಬೀರಿದ್ದುಂಟು. 2020ರಲ್ಲಿ ಕಂಡುಬಂದ ಸೋಂಕಿನ ಮೊದಲ ಅಲೆ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಯಿತು. ಆದರೆ ಇಂಥ ಕಠಿನ ನಿರ್ಧಾರ ಕೈಗೊಳ್ಳಲು ದೃಢ ನಾಯಕತ್ವ ದೇಶ ಹೊಂದಿತ್ತು ಎನ್ನುವುದನ್ನು ನಾವು ಮರೆಯ ಬಾರದು. ಇದರ ಜತೆಗೆ ಹಣದುಬ್ಬರ ಏರಿಕೆ, ಸೋಂಕಿನಿಂದಾಗಿ ಉಂಟಾಗುವ ಸಾವಿನ ಪ್ರಮಾಣ ತಡೆ ಮತ್ತು ಇತರ ಕ್ರಮಗಳನ್ನು ಆದ್ಯತೆಯಲ್ಲಿ ಸರಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ.
– ಎಲ್ಲರಿಗೂ ಮನೆ: 2022ರ ಒಳಗಾಗಿ ದೇಶದ ಎಲ್ಲರಿಗೂ ಪಕ್ಕಾ ಮನೆ ನಿರ್ಮಿಸಲು ಕೇಂದ್ರ ಈಗಾಗಲೇ ಗುರಿ ಹಾಕಿಕೊಂಡಿದೆ. ಅದರಂತೆ ನಗರ ಪ್ರದೇಶದಲ್ಲಿ 1.12 ಕೋಟಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2.95 ಕೋಟಿ ಮನೆಗಳನ್ನು ನಿರ್ಮಿಸಲು ಉದ್ದೇ ಶಿಸಲಾಗಿದೆ. ಈ ಪೈಕಿ 1.87 ಕೋಟಿ ಮನೆಗಳನ್ನು ಕಟ್ಟಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿಯೇ ಶೇ.75ರಷ್ಟು ಮನೆಗಳು ಇವೆ.
Related Articles
Advertisement
– ನಲ್ಲಿ ನೀರು: ಎನ್‌ಡಿಎ ಸರಕಾರದ ಎರಡನೇ ಅವಧಿಯಲ್ಲಿ ಎಲ್ಲರ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪಣ ತೊಡ ಲಾಯಿತು. 2019ರಲ್ಲಿ “ಜಲ ಜೀವನ ಮಿಷನ್’ ಜಾರಿಗೊ ಳಿಸಿದ ಬಳಿಕ ಗ್ರಾಮೀಣ ಭಾಗದ 4 ಕೋಟಿ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಜಾರಿಗೊಳಿಸುವುದಕ್ಕೆ ಮುನ್ನ ಗ್ರಾಮೀಣ ಭಾಗದಲ್ಲಿ 3.3 ಕೋಟಿ ಮನೆಗಳಿಗೆ ನಲ್ಲಿ ನೀರು (ಶೇ.17) ವ್ಯವಸ್ಥೆ ಇತ್ತು. ಸದ್ಯ ಅದು 7.2 ಕೋಟಿ ಮನೆಗಳಿಗೆ (ಶೇ.37.7) ಏರಿಕೆಯಾಗಿದೆ.
– ಗ್ರಾಮೀಣ ರಸ್ತೆ ಅಭಿವೃದ್ಧಿ: ಸದ್ಯ ದೇಶದ ಶೇ.97ರಷ್ಟು ಗ್ರಾಮೀಣ ಪ್ರದೇಶಗಳಿಗೆ ಅತ್ಯುತ್ತಮ ರಸ್ತೆ ಸಂಪರ್ಕ ಇದೆ. 2014ರಲ್ಲಿ ಅದರ ಪ್ರಮಾಣ ಶೇ. 56 ಆಗಿತ್ತು. 2014ರ ಬಳಿಕ ಇದುವರೆಗೆ 2.3 ಲಕ್ಷ ಕಿ.ಮೀ. ರಸ್ತೆ ಪೂರ್ತಿಗೊಳಿಸಲಾಗಿದೆ.
– ಇತರ ಮೂಲಸೌಕರ್ಯ: ಇಂಧನ, ರೈಲ್ವೇ, ನೀರಾವರಿ, ಶಿಕ್ಷಣ, ಆರೋಗ್ಯ, ನಗರ, ಸಂಚಾರ ಮತ್ತು ನೀರು ಪೂರೈಕೆ ಕ್ಷೇತ್ರ ಗಳಲ್ಲಿ 2014ರಿಂದ ಇದುವರೆಗೆ 50 ಲಕ್ಷ ಕೋಟಿ ರೂ. ಮೊತ್ತದ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ 35 ಹೊಸ ವಿಮಾನ ನಿಲ್ದಾಣ ಸ್ಥಾಪಿಸಲಾಗಿದೆ.
ಆರೋಗ್ಯ ಮತ್ತು ಯೋಗ ಕ್ಷೇಮ– ಅಡುಗೆ ಅನಿಲ ಸಂಪರ್ಕ : 2014ರಲ್ಲಿ ದೇಶದಲ್ಲಿ 12 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿತ್ತು. ಸದ್ಯ ಈ ಸಂಖ್ಯೆ 29 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ, 8 ಕೋಟಿ ಎಲ್‌ಪಿಜಿ ಸಂಪರ್ಕ ಗಳನ್ನು ಉಚಿತವಾಗಿ ಗ್ರಾಮೀಣ ಮಹಿಳೆಯರಿಗೆ ನೀಡಲಾಗಿದೆ. ಹೊಗೆ ರಹಿತ ವಾತಾವರಣ ಸೃಷ್ಟಿಸುವ ಮೂಲಕ ಅವರ ಆರೋಗ್ಯ ದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿದೆ.
ಎಲ್‌ಪಿಜಿ ಸಂಪರ್ಕದಲ್ಲಿ ಶೇ.100ರಷ್ಟು ಗುರಿ ಸಾಧಿಸಲು ಇನ್ನೂ ಒಂದು ಕೋಟಿ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. – ಶುಚಿತ್ವ: 2014ರಲ್ಲಿ ದೇಶದ ಶೇ.38.7ರಷ್ಟು ಮನೆಗಳು ಶೌಚಾಲಯ ಹೊಂದಿದ್ದವು. ಸದ್ಯ ಅದರ ಪ್ರಮಾಣ ಶೇ.100 ಆಗಿದೆ. ದೇಶದ 6 ಲಕ್ಷಕ್ಕಿಂತಲೂ ಅಧಿಕ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಈ ಮೂಲಕ ಬಯಲು ಶೌಚ ಎಂಬ ತೊಂದರೆಯಿಂದ ಗ್ರಾಮೀಣ ಪ್ರದೇಶಗಳು ಪಾರಾಗಿವೆ. – ಕೈಗೆಟಕುವ ಆರೋಗ್ಯ ವ್ಯವಸ್ಥೆ: ಎಲ್ಲರಿಗೂ ಆರೋಗ್ಯ ನೀಡುವ ನಿಟ್ಟಿನಲ್ಲಿ ಜಾರಿಗೊಳಿಸಿದ “ಆಯುಷ್ಮಾನ್ ಭಾರತ’ ಯೋಜನೆಯಡಿ ಪ್ರತೀ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತದೆ. ಹಾಲಿ ವರ್ಷದ ಮೇಗೆ ಅನ್ವಯ ವಾಗುವಂತೆ 1.82 ಕೋಟಿ ಉಚಿತ ಚಿಕಿತ್ಸೆ ನೀಡಲಾಗಿದೆ. ಒಟ್ಟು 50 ಕೋಟಿ ಮಂದಿಗೆೆ ಸೌಲಭ್ಯ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.ಇದುವ ರೆಗೆ 20 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ವರ್ಷಾಂತ್ಯ ದಲ್ಲಿ 200 ಕೋಟಿ ಡೋಸ್ ಲಸಿಕೆ ಗುರಿ ಹಾಕಿಕೊಂಡಿದೆ. – ತಾಯಿ ಮತ್ತು ಮಕ್ಕಳ ಆರೋಗ್ಯ: “ಮಿಷನ್ ಇಂದ್ರ ಧನುಷ್’ ಮೂಲಕ ಪ್ರತೀ ವರ್ಷ 2.65 ಕೋಟಿ ಮಕ್ಕಳಿಗೆ ಮತ್ತು 2.5 ಕೋಟಿ ಗರ್ಭಿಣಿಯರಿಗೆ 12 ಮಾರಕ ಕಾಯಿಲೆಗಳಿಂದ ರಕ್ಷಿ ಸುವ ನಿಟ್ಟಿನಲ್ಲಿ ಚುಚ್ಚು ಮದ್ದು ನೀಡಲಾಗುತ್ತಿದೆ. 2014ಕ್ಕೆ ಹೋಲಿಕೆ ಮಾಡಿಕೊಂಡರೆ ಶಿಶು ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಆ ವರ್ಷ ಶಿಶುಮರಣ ಪ್ರಮಾಣ ಪ್ರತೀ ಸಾವಿರ ಶಿಶುಗಳಿಗೆ ಶೇ.36.9 ಇದ್ದದ್ದು 2019ರಲ್ಲಿ ಶೇ. 28.3ಕ್ಕೆ ಇಳಿಕೆಯಾಗಿತ್ತು. ಮಾನವ ಸಂಪನ್ಮೂಲ
– ಹೊಸ ಶಿಕ್ಷಣ ನೀತಿ: ಮೂವತ್ತನಾಲ್ಕು ವರ್ಷಗಳ ಬಳಿಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಪ್ರಕಟಿಸಲಾಯಿತು. ಜ್ಞಾನವೇ ಅರ್ಥ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುವ ಈ ದಿನಮಾನದಲ್ಲಿ ಹೆಚ್ಚು ಸ್ಪರ್ಧಾತ್ಮಕ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ. – ಶೈಕ್ಷಣಿಕ ಮೂಲಸೌಕರ್ಯ: ಶಿಕ್ಷಣ ಸಂಸ್ಥೆಗಳನ್ನು ದೇಶದ ಹಲವು ಭಾಗಗಳಲ್ಲಿ ಸ್ಥಾಪಿಸಲು ಮೋದಿ ನೇತೃತ್ವದ ಸರಕಾರ ಕ್ರಮ ಕೈಗೊಂಡಿದೆ. 2014ರಲ್ಲಿ ಇದ್ದ 7 ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗಳ ಸಂಖ್ಯೆ ಹಾಲಿ ವರ್ಷ 21ಕ್ಕೆ ಏರಿಕೆಯಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್‌ಆಫ್ ಟೆಕ್ನಾಲಜಿಗಳನ್ನು 16ರಿಂದ 23ಕ್ಕೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳನ್ನು 7ರಿಂದ 20ಕ್ಕೆ ಹೆಚ್ಚಿಸಲಾಗಿದೆ. – ವೈದ್ಯಕೀಯ ಸಿಬಂದಿಗೆ ತರಬೇತಿ: 2014ರಲ್ಲಿ ವೈದ್ಯ ಸ್ನಾತಕೋತ್ತರ ಕೋರ್ಸ್ ಸೀಟುಗಳ ಸಂಖ್ಯೆ 24 ಸಾವಿರ ಇದ್ದದ್ದು 2021 ರಲ್ಲಿ ಸರಿಸುಮಾರು 54 ಸಾವಿರಕ್ಕೆ ಏರಿಕೆ ಯಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 125ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 54 ಸಾವಿರ ದಿಂದ 80 ಸಾವಿರಕ್ಕೂ ಹೆಚ್ಚಾಗಿದೆ. – ಶಿಕ್ಷಣ ಪಡೆಯಲು ಅವಕಾಶ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಮೆಚ್ಚುಗೆಯ ಸಾಧನೆ ಮಾಡಲಾಗಿದೆ. 2014ರಲ್ಲಿ 3.23 ಕೋಟಿ ಮಂದಿ ಉನ್ನತ ಶಿಕ್ಷಣ ಪಡೆದಿದ್ದರೆ, 2019ರ ವೇಳೆಗೆ ಅಂಥವರ ಸಂಖ್ಯೆ 3.74 ಕೋಟಿಗೆ ಏರಿಕೆಯಾಗಿದೆ. ಮಹಿಳೆ ಯರ ಸಹಿತ ದೇಶದ ಹೆಚ್ಚಿನವರು ಪದವೀಧರರಾಗಲು ಆಸಕ್ತಿ ತೋರಿ ಸು ತ್ತಿದ್ದಾರೆ. ಶಿಕ್ಷಣ ಪಡೆಯಲು ಮಹಿಳೆಯರು ನೋಂದಣಿ ಮಾಡಿಸಿ ಕೊಳ್ಳುವ ಪ್ರಮಾಣ 2014ರಲ್ಲಿ ಶೇ.22 ಆಗಿತ್ತು. 2019ರಲ್ಲಿ ಅದು ಶೇ.26.4ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಉನ್ನತ ಶಿಕ್ಷಣ ಪಡೆದವರಿಗೆ ಸೂಕ್ತ ಉದ್ಯೋಗ ನೀಡುವುದೂ ಆದ್ಯತೆಯ ವಿಚಾರವಾಗಬೇಕು. – ಪ್ರಮಾಣ ಹೆಚ್ಚಳ: ಉನ್ನತ ಶಿಕ್ಷಣ ಪಡೆಯುವ ಎಸ್‌ಸಿ, ಎಸ್‌ಟಿ, ಒಬಿಸಿ, ಮುಸ್ಲಿಮರು ಮತ್ತು ಇತರ ಅಲ್ಪ ಸಂಖ್ಯಾಕ ಸಮುದಾಯ ದವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2012-13ರಿಂದ 2018-19ರ ಲೆಕ್ಕಾಚಾರ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಎಸ್‌ಸಿ ಸಮುದಾಯದ ಶೇ.6.3, ಎಸ್‌ಟಿ ಸಮುದಾಯದ ಶೇ.7.8, ಒಬಿಸಿ ಸಮುದಾಯದ ಶೇ.6.3, ಮುಸ್ಲಿಂ ಸಮುದಾಯದ ಶೇ.7.7, ಇತರ ಅಲ್ಪಸಂಖ್ಯಾಕ ಸಮುದಾಯದ ಶೇ.7.5 ಮಂದಿ ವಿವಿಧ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ಸಾಮಾನ್ಯ ವರ್ಗ ಪ್ರಮಾಣ ಶೇ.3.7 ಆಗಿದ್ದು, ಒಟ್ಟಾರೆಯಾಗಿ ಇಳಿಮುಖವಾಗಿದೆ. – ಉದ್ಯೋಗ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮತ್ತು ಕಾರ್ಮಿಕರ ರಾಜ್ಯ ವಿಮಾ ಯೋಜನೆ (ಇಎಸ್‌ಐ)ಗಳ ಮೂಲಕ ಪ್ರತೀ ತಿಂಗಳು ಎಷ್ಟು ಮಂದಿ ಉದ್ಯೋಗ ಪಡೆದು ಕೊಂಡಿದ್ದಾರೆ ಎಂಬುದನ್ನು ಗಮನಿಸಲು 2017ರ ಸೆಪ್ಟಂಬರ್‌ನಿಂದ ಆರಂಭಿಸಲಾಯಿತು. 2017ರ ಸೆಪ್ಟಂಬರ್‌ನಿಂದ ಪ್ರಸಕ್ತ ವರ್ಷದ ಫೆಬ್ರವರಿವರೆಗೆ 4.12 ಕೋಟಿ ಮಂದಿ ಹೊಸ ಸದಸ್ಯರು ಇಪಿಎಫ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಡಿಜಿಟಲ್, ವಿತ್ತೀಯ ಮತ್ತು ಆರ್ಥಿಕ ಸೇರ್ಪಡೆ
– ಮೊಬೈಲ್ ಫೋನ್‌ಗಳು: ಟ್ರಾಯ್ ದಾಖಲೆಗಳ ಪ್ರಕಾರ ಈ ವರ್ಷದ ಫೆಬ್ರವರಿವರೆಗೆ ಮೊಬೈಲ್ ಸಂಪರ್ಕ ಸಂಖ್ಯೆ 2014ರಲ್ಲಿ ಇದ್ದ 0.9 ಬಿಲಿಯನ್‌ನಿಂದ 1.17 ಬಿಲಿಯನ್‌ಗೆ ಏರಿಕೆ ಯಾ ಗಿದೆ. ಈ ಪೈಕಿ 528.5 ಮಿಲಿಯ ಮೊಬೈಲ್ ಸಂಪರ್ಕಗಳು ಗ್ರಾಮೀಣ ಪ್ರದೇಶದಲ್ಲಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಜನರಿಗೂ ವ್ಯಾಪಾರ ವಹಿವಾಟು ಅಂದರೆ ಕೃಷಿ ಉತ್ಪನ್ನಗಳ ಮಾರಾ ಟದಲ್ಲಿ ಬಹಳಷ್ಟು ನೆರವಾಗಿದ್ದು, ಸಂಪಾದನೆಯನ್ನು ವೃದ್ಧಿಸಲು ನೆರವಾಗಿದೆ. ಪ್ರತೀ ತಿಂಗಳೂ ಸರಾಸರಿ 15 ಜಿಬಿ ಇಂಟರ್‌ನೆಟ್ ಬಳಕೆ ಆಗುತ್ತಿದೆ. 2019ರಲ್ಲಿ ಅದರ ಪ್ರಮಾಣ 11.2ಜಿಬಿ ಆಗಿತ್ತು. – ಇಂಟರ್‌ನೆಟ್ ಮತ್ತು ಡಿಜಿಟಲ್ ವೇದಿಕೆಗಳ ಲಭ್ಯತೆ: ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 2014ರಲ್ಲಿ 251 ಮಿಲಿಯದಿಂದ ಈ ವರ್ಷದ ಫೆಬ್ರವರಿಯಲ್ಲಿ 765 ಮಿಲಿಯಕ್ಕೆ ಏರಿಕೆಯಾಗಿದೆ. ಇದರ ಜತೆಗೆ 1.59 ಲಕ್ಷ ಗ್ರಾ.ಪಂ.ಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಜನರಿಗೆ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಲು ಮತ್ತು ನೇರ ನಗದು ವರ್ಗಾವಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲೂ ನೆರವಾಗಿದೆ. – ಬ್ಯಾಂಕ್ ಖಾತೆಗಳು: ಜನಧನ ಯೋಜನೆ ಮೂಲಕ ಕಳೆದ ತಿಂಗಳವರೆಗೆ 42.4 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲಿ ಒಟ್ಟು 1.44 ಲಕ್ಷ ಕೋಟಿ ರೂ.ಠೇವಣಿ ಇದೆ. ಖಾತೆದಾರರ ಪೈಕಿ ಶೇ.55ರಷ್ಟು ಮಹಿಳೆಯರೇ ಆಗಿದ್ದಾರೆ. – ನೇರ ನಗದು ವರ್ಗಾವಣೆ: ಕೇಂದ್ರ ಸರಕಾರದ 427 ವಿವಿಧ ಯೋಜನೆಗಳ ಮೂಲಕ ಅರ್ಹರಿಗೆ ನೀಡಬೇಕಾಗಿದ್ದ 15.2 ಲಕ್ಷ ಕೋಟಿ ರೂ. ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೇರವಾಗಿ ಫಲಾನುಭವಿಗಳ ಜನಧನ ಖಾತೆಗೆ ವರ್ಗಾ ಯಿಸಲಾಗುತ್ತಿದೆ. ಕೊರೊನಾ ಸೋಂಕಿನಿಂದ ತತ್ತರಿಸಿರುವ 40 ಕೋಟಿಗಿಂತಲೂ ಅಧಿಕ ಮಂದಿಗೆ ಇದು ವರವಾಗಿ ಪರಿಣಮಿಸಿದೆ. – ಸಣ್ಣ ಉದ್ದಿಮೆಗಳಿಗೆ ಸಾಲ: ಸಣ್ಣ ಪ್ರಮಾಣದ ಉದ್ದಿಮೆ ಸ್ಥಾಪನೆ ಮಾಡಿಕೊಂಡು, ಉತ್ತಮ ಜೀವನ ರೂಪಿಸುವ ಉತ್ಸಾಹ ಇರುವವರಿಗೆ ಮಾರ್ಚ್ ಅಂತ್ಯಕ್ಕೆ ಒಳಪಟ್ಟಂತೆ ಮುದ್ರಾ ಯೋಜನೆ ಮೂಲಕ 28.8 ಕೋಟಿ ಸಾಲಗಳನ್ನು ವಿತರಿಸಲಾಗಿದೆ. ಅದರ ಮೊತ್ತವೇ 14.6 ಲಕ್ಷ ಕೋಟಿ ರೂ. ಆಗಿದೆ. – ರೈತರು: ಸರಕಾರ ಜಾರಿಗೊಳಿಸಿದ ಬೆಳೆ ವಿಮೆಯಿಂದಾಗಿ 8.94 ಕೋಟಿ ರೈತರಿಗೆ ಅನುಕೂಲವಾಗಿದೆ. ಇದರಿಂದಾಗಿ ಪ್ರಾಕೃತಿಕ ವಿಕೋಪ ದಿಂದ, ಕಾಡು ಪ್ರಾಣಿಗಳ ದಾಳಿಯಿಂದ ಹಾಳಾದ ಬೆಳೆಗೆ ಪರಿಹಾರ ಕಲ್ಪಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11.3 ಕೋಟಿ ರೈತರಿಗೆ ಅನುಕೂಲವಾಗಿದೆ. ಈ ಯೋಜನೆಯ ಅನ್ವಯ ವಾರ್ಷಿಕವಾಗಿ 6 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. 2022ರ ಆಗಸ್ಟ್‌ನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳಲಿರುವ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಜೀವನಕ್ಕೆ ಅಗತ್ಯವಾಗಿರುವ ಪ್ರಾಥಮಿಕ ಜೀವನಾವ ಶ್ಯಕ ವ್ಯವಸ್ಥೆ ಕಲ್ಪಿಸಬೇಕು ಎಂಬ ಮಹಾನ್ ಸತ್ಸಂಕಲ್ಪವನ್ನು ಪ್ರಧಾನಿ ಹೊಂದಿದ್ದಾರೆ. ಮೇಲ್ಕಂಡ ಸಾಧನಾತ್ಮಕ ಅಂಕಿ-ಅಂಶಗಳನ್ನು ಗಮನಿಸಿ ದಾಗ ಪ್ರಧಾನಿಯವರ ಕನಸು ಸಾಕಾರಗೊಳ್ಳುವುದು ಖಚಿತ. ಇಂಥ ಹೆಮ್ಮೆಯ ಸಾಧನೆಗಳ ಬೆಳ್ಳಿಗೆರೆಗಳ ನಡುವೆಯೇ ಅಪ್ಪಳಿ ಸಿದ್ದು ಕೊರೊನಾ. ಇದರಿಂದಾಗಿ ಆರ್ಥಿಕವಾಗಿ ಉಂಟಾದ ಹೊಡೆತ ಅಪಾರ. ಕಳೆದ ವರ್ಷ ಮೋದಿ ಸರಕಾರ ವ್ಯವಸ್ಥೆಯ ಕೊನೆಯ ಹಂತದಲ್ಲಿರುವವರಿಗೆ ಆರ್ಥಿಕ ನೆರವು, ಆಹಾರ ನೀಡಿಕೆ, ಅರ್ಥ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐನ ಕ್ರಮಗಳು ಸೇರಿದಂತೆ ಒಟ್ಟು 20 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೇಜ್ ನೀಡಿದೆ. ಸೋಂಕಿನ ಕರಾಳಹಸ್ತದ ಹೊರತಾಗಿಯೂ 2020-21ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ 82 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದಕ್ಕೆಲ್ಲ ಕಳಶಪ್ರಾಯವೋ ಎಂಬಂತೆ ದೇಶದ ವಿದೇಶಿ ವಿನಿಮಯ ನಿಧಿ ಕೂಡ ಇದುವರೆಗಿನ ದಾಖಲೆಯ 585 ಬಿಲಿಯನ್ ಡಾಲರ್‌ಗೆ ಜಿಗಿದಿದೆ. ಮೊದಲ ಸೋಂಕಿನ ಬಳಿಕ ಎರಡನೇ ಅಲೆಯೂ ಹಾವಳಿ ಮಾಡಿದೆ. ಮೇ 24ಕ್ಕೆ ಕೊನೆಯಾಗಿರುವ ಮಾಹಿತಿ ಪ್ರಕಾರ ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ, ನಮ್ಮ ದೇಶದಲ್ಲಿ ಪ್ರತೀ ಮಿಲಿಯ ಜನಸಂಖ್ಯೆಗೆ ದೃಢಪಟ್ಟ ಸೋಂಕು ಸಂಖ್ಯೆ 19, 385. ಬ್ರೆಜಿಲ್‌ನಲ್ಲಿ ಅದು 75,841, ಅಮೆರಿಕದಲ್ಲಿ 1,00,130, ಯು.ಕೆ.ಯಲ್ಲಿ 66,004 ಆಗಿದೆ. ಸಾವಿನ ಪ್ರಮಾ ಣವನ್ನೂ ಗಣನೆಗೆ ತೆಗೆದುಕೊಂಡರೆ ಪ್ರತೀ ಮಿಲಿಯ ಜನ ಸಂಖ್ಯೆಗೆ 220 ಆಗಿದೆ. ಅದುವೇ ಬ್ರೆಜಿಲ್‌ನಲ್ಲಿ 2,116, ಅಮೆರಿಕದಲ್ಲಿ 1,784, ಯು.ಕೆ.ಯಲ್ಲಿ 1,885 ಮಂದಿ ಅಸುನೀಗಿದ್ದಾರೆ. ಜೀವಹಾನಿ ಕಡಿಮೆಯಾದರೂ ಕೂಡ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಸದ್ಯದ ಪರಿಸ್ಥಿತಿ ಎತ್ತಿ ತೋರಿಸಿದೆ ಎನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಹೀಗಾಗಿ ಮುಂದಿನ 3 ವರ್ಷಗಳ ಅವಧಿಯಲ್ಲಿ ದೇಶದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಬಲಪಡಿಸುವಂತೆ ಮಾಡಬೇಕಾ ದದ್ದು ಸರಕಾರದ ಆದ್ಯತೆಯಾಗಬೇಕಾಗಿದೆ. ಇದರ ಜತೆಗೆ ಸಮರ್ಥ ವಿದೇಶಾಂಗ ನೀತಿಯಿಂದಾಗಿ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಏಷ್ಯಾ ಖಂಡದಲ್ಲಿ ಭಾರತದ ಜತೆಗೆ ವ್ಯೂಹಾತ್ಮಕ ಬಾಂಧವ್ಯ ಹೊಂದಬಹುದು ಎಂಬ ನಂಬಿಕೆ ಮೂಡಿದೆ. ಜತೆಗೆ ದೇಶದ ಮಾರುಕಟ್ಟೆ ಯಲ್ಲಿ ಇತರ ರಾಷ್ಟ್ರಗಳ ಬಂಡವಾಳ ಹೂಡಿಕೆ ದಾರರೂ ಕೂಡ ವಿಶ್ವಾಸ ಇರಿಸಿ ಹೂಡಿಕೆ ಮಾಡುತ್ತಿದ್ದಾರೆ. ಒಂದು ದಶಕದ ಅವಧಿಯಲ್ಲಿ ಆಧಾರ್, ಯುಪಿಐ ಸೇರಿದಂತೆ ಹಲವು ಡಿಜಿಟಲ್ ವ್ಯವಸ್ಥೆಗಳು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡು ಸಾರ್ವಜನಿಕ ಜೀವನದ ವ್ಯವಸ್ಥೆ -ವಹಿವಾಟುಗಳನ್ನು ಇನ್ನಷ್ಟು ಸುಲಲಿತಗೊಳಿಸಲು ನೆರವು ನೀಡಿವೆ. ದೇಶ ತಾಂತ್ರಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರೂ, ಕೊರೊನಾ ಸೋಂಕಿನ ಈ ಸಂಕಷ್ಟಮಯ ಸನ್ನಿವೇಶದಲ್ಲಿ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಂಡು ಬಲವರ್ಧಿಸ ಬೇಕಾಗಿದೆ. ಹೀಗಾಗಿ ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಗಮನಹರಿಸಿ ಜನರಿಗೆ ಮತ್ತೂಮ್ಮೆ ಇಂಥ ಸಂಕಷ್ಟ ಬರದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಸವಾಲು ಎದುರಿಸಲು ಸರಕಾರ ಸನ್ನದ್ಧವಾಗಿದ್ದು, ಅದಕ್ಕಾಗಿ ಸೋಂಕು ನಿಯಂತ್ರಣ ಕ್ರಮಗಳು ಮತ್ತು ದೇಶವಾಸಿಗಳೆಲ್ಲರಿಗೂ ಲಸಿಕೆ ನೀಡಲು ಶುರು ಮಾಡಲಾಗಿದೆ. ಇದರಿಂದಾಗಿ ಆರ್ಥಿಕ ಕ್ಷೇತ್ರದ ಪ್ರಗತಿ ಮತ್ತು ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶ ವೃದ್ಧಿಸಲಿದೆ. ಕಳೆದ ವರ್ಷ ಜಗತ್ತಿನಲ್ಲಿ ಗೋಚರಿಸಿದ್ದ ಆರ್ಥಿಕ ಹಿಂಜರಿತ ಮಾರ್ಚ್ 2021ರಲ್ಲಿ ಮುಕ್ತಾಯಗೊಂಡ ಬಳಿಕ ಅರ್ಥ ವ್ಯವಸ್ಥೆಯ ಬೆಳವಣಿಗೆ ಚೇತರಿಸಿಕೊಂಡಿದೆ. ಅದಕ್ಕೆ ಪೂರಕ ವಾಗಿ ಜಿಎಸ್‌ಟಿ ಸಂಗ್ರಹ 1.41 ಲಕ್ಷ ಕೋಟಿ ರೂ. ಆಗಿದೆ. ಪ್ರತಿಕೂಲ ಪರಿಸ್ಥಿತಿ ಯಲ್ಲಿಯೂ ಮೇರು ಸಾಧನೆಗಳನ್ನು ಮಾಡಿದ ಮೋದಿ ಸರಕಾರ ಏನನ್ನೂ ಸಾಧಿಸಲಿಲ್ಲ ಎಂದು ಜರೆಯುವ ಹೊಸದಿಲ್ಲಿಯ ಲ್ಯೂಟೆನ್ಸ್ ನ ಹಲವು ಮಂದಿ ಈಗ ಬಾಯಿ ಮುಚ್ಚುವಂತಾಗಿದೆ. ಕೊರೊನಾ ತಂದಿಟ್ಟ ಸಂಕೀರ್ಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರಕಾರದ ಹಲವು ಸಾಧನೆಗಳು ಮಂಕಾಗಿವೆ ಎನ್ನುವುದು ಸತ್ಯವೇ. ಸರಕಾರ ಹಲವು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ನಿಸ್ಪೃಹ ಪರಾಮರ್ಶೆಯ ಮೂಲಕ ದೇಶ ಹೇಗೆ ಸಾಗಿಬಂದಿದೆ ಮತ್ತು ಸಂಕಷ್ಟ ಪರಿಸ್ಥಿತಿಯಿಂದ ಚೇತರಿಸಿಕೊಂಡು ಸಮಗ್ರ ಅಭಿವೃದ್ಧಿ ಸಾಧಿ ಸುವ ಹಂತದತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿ ಇದಾಗಿದೆ. – ಟಿ.ವಿ.ಮೋಹನ್‌ದಾಸ್ ಪೈ
– ನಿಶಾ ಹೊಳ್ಳ