ಮಂಗಳೂರು: ಲೋಕಸಭೆ ಇರಬಹುದು, ವಿಧಾನಸಭೆ ಇರಬಹುದು. ಪ್ರತೀ ಚುನಾವಣೆ ವೇಳೆಯೂ ಕರಾವಳಿಗೆ ಆಗಮಿಸಿ ಭರ್ಜರಿ ರೋಡ್ ಶೋ, ಪ್ರಚಾರ ಸಭೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಈ ಕಡೆ ಬರುವುದಿಲ್ಲವೇ?
ಹೀಗೊಂದು ಪ್ರಶ್ನೆ ಎದುರಾಗಿದೆ. ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿರುವ ಕಾರಣ, ಮೋದಿ ಅವರನ್ನು ಗೆಲುವು ಕಠಿನ ಇರುವಂತಹ ಕಡೆಗಳ ರ್ಯಾಲಿಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ವರಿಷ್ಠರು ಆಲೋಚಿಸಿದ್ದಾರೆ.
ಪಕ್ಷದ ನಾಯಕರ ಪ್ರಕಾರ, ಪಕ್ಷದಿಂದ ಕ್ಲಸ್ಟರ್‌ಗಳನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಶಿವಮೊಗ್ಗದಲ್ಲಿ ಸೋಮವಾರ ನಡೆದ ಮೋದಿ ಪ್ರಚಾರ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಒಳಗೊಂಡ ಕ್ಲಸ್ಟರ್ ಕೂಡ ಸೇರಿತ್ತು. ಇಲ್ಲಿನ ಬಿಜೆಪಿ ಅಭ್ಯರ್ಥಿಗಳಾದ ಕ್ಯಾ| ಬೃಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಕೂಡ ಭಾಗವಹಿಸಿದ್ದರು.
ಇದುವರೆಗೆ ತಪ್ಪಿಸಿಲ್ಲ
ಮೋದಿ ಅವರು ಕರಾವಳಿಯಲ್ಲಿ ಇದುವರೆಗೆ ಚುನಾವಣೆ ಪ್ರಚಾರವನ್ನು ತಪ್ಪಿಸಿಲ್ಲ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ 2014ರ ಫೆಬ್ರವರಿಯಲ್ಲಿ ನೆಹರೂ ಮೈದಾನದಲ್ಲಿ ನಡೆದ ಭಾರತ ಗೆಲ್ಲಿಸಿ ಸಮಾವೇಶ, 2019ರ ಎಪ್ರಿಲ್ ನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶಗಳಲ್ಲಿ ಮೋದಿ ಪಾಲ್ಗೊಂಡಿದ್ದರು. 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ರ್ಯಾಲಿಯಲ್ಲಿ ಇದೇ ಮೈದಾನದಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ್ದರು. 2018ರಲ್ಲೂ ವಿಧಾನಸಭಾ ಚುನಾವಣ ಪ್ರಚಾರಕ್ಕೆ ಮಂಗಳೂರಿಗೆ ಬಂದು “ಸರಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ’ ಅಭಿಯಾನ ನಡೆಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲೂ ಮೂಲ್ಕಿಯ ಕಾರ್ನಾಡ್ ಬಳಿಯ ಮೈದಾನದಲ್ಲಿ ಹಾಗೂ ಉಡುಪಿಯಲ್ಲೂ ಚುನಾವಣ ರ್ಯಾಲಿಗಳಲ್ಲಿ ಮೋದಿ ಭಾಗವಹಿಸಿದ್ದರು.
ಬಂದರೂ ಬರಬಹುದು!
ಸದ್ಯದ ಮಾಹಿತಿ ಪ್ರಕಾರ ಮತ್ತೆ ಕರಾವಳಿಗೆ ಮೋದಿ ಬರುವ ಸಾಧ್ಯತೆ ಕಡಿಮೆ. ಆದರೆ ಇನ್ನೂ ಕೆಲವರ ಪ್ರಕಾರ ಚುನಾವಣ ಪ್ರಚಾರ ಇನ್ನೂ ಆರಂಭವಾಗಿಲ್ಲ, ಒಂದುವೇಳೆ ಮುಂದೆ ಸಮಯ ಸಿಕ್ಕಿದರೆ ಮೋದಿ ರ್ಯಾಲಿಯನ್ನೋ ಅಥವಾ ತುರ್ತು ರೋಡ್ ಶೋಗಳನ್ನೋ ನಿಗದಿ ಪಡಿಸುವ ಸಾಧ್ಯತೆಯೂ ಇಲ್ಲದಿಲ್ಲ. ಒಂದುವೇಳೆ ಕರಾವಳಿಗೆ ಮೋದಿ ಬರದಿದ್ದರೂ ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತಿತರ ಹಿರಿಯ ಮುಖಂಡರು ಆಗಮಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಬಿಜೆಪಿ ನಾಯಕರು.