Advertisement

ಪ್ರಧಾನಿ ಮೋದಿ ಚಾರಿತ್ರಾರ್ಹ ನಿರ್ಧಾರ: ಬಿಎಸ್‍ವೈ

12:52 AM Aug 16, 2019 | Team Udayavani |

ಬೆಂಗಳೂರು: “ಸಂವಿಧಾನದ 370ನೇ ವಿಧಿ ರದ್ದುಗೊಂಡಿರುವ ಪರಿಣಾಮ ಭಯೋತ್ಪಾದಕರ ಕಪಿಮುಷ್ಠಿಯಿಂದ ಕಾಶ್ಮೀರ ಬಿಡುಗಡೆ ಹೊಂದಿದ್ದು ಈ ಚರಿತ್ರಾರ್ಹ ನಿರ್ಧಾರದಿಂದ ಭಾರತೀಯ ಇತಿಹಾಸದಲ್ಲಿ ಪ್ರಧಾನಿ ಮೋದಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣ್ಣಿಸಿದರು.

Advertisement

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶ ಕಂಡ ಮಹತ್ವದ ಬೆಳವಣಿಗೆ ಕುರಿತು ಉಲ್ಲೇಖೀಸಲೇಬೇಕಾಗಿದೆ. ಭಾರತದ ಕಿರೀಟ ಪ್ರಾಯ ರಾಜ್ಯ ಕಾಶ್ಮೀರ ಆಗಿದ್ದು ಕಳೆದ 7 ದಶಕಗಳಲ್ಲಿ ಆಗಿರುವ ಬೆಳವಣಿಗೆಗಳು ಊಹೆಗೂ ಮೀರಿದವು. ನೆರೆ ರಾಷ್ಟ್ರದ ಚಿತಾವಣೆ, ಪಿತೂರಿ, ವಿಧ್ವಂಸಕ ಕೃತ್ಯಗಳಿಗೆ ಇನ್ನು ಅವಕಾಶವಿಲ್ಲ ಎಂದು ಹೇಳಿದರು.

ಕಾಶ್ಮೀರದಲ್ಲಿ ವೈವಿಧ್ಯತೆ ಮರೆಮಾಚಿ ಏಕಪ್ರಕಾರ ಸಂಸ್ಕೃತಿಯನ್ನು ಬಲವಂತವಾಗಿ ಹೇರಿ, ಅಲ್ಲಿನ ಮೂಲ ನಿವಾಸಿಗಳನ್ನು ಮೂಲೋತ್ಪಾಟನೆ ಮಾಡಲಾಗಿತ್ತು. ರಾಷ್ಟ್ರ ವಿರೋಧಿ, ಭಯೋತ್ಪಾದಕ ಸಂಘಟನೆಗಳ ಕಪಿಮುಷ್ಠಿಯಲ್ಲಿ ಸಿಲುಕಿತ್ತು. ಶಾಂತಿ ಕನಸಿನ ಮಾತಾಗಿತ್ತು. ತ್ರಿವರ್ಣ ಧ್ವಜದ ಬದಲು ನೆರೆಯ ರಾಷ್ಟ್ರದ ಧ್ವಜ ಅಲ್ಲಲ್ಲಿ ಹಾರಾಡುತ್ತಿತ್ತು. ಇದಕ್ಕೆ ಇತಿಶ್ರೀ ಹಾಡಲು ಪ್ರಧಾನಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆಂದರು.

ಬದುಕು ಕಟ್ಟಿಕೊಳ್ಳಲಿ: ನೆರೆ ರಾಷ್ಟ್ರದ ಚಿತಾವಣೆ, ಪಿತೂರಿ ಮತ್ತು ವಿಧ್ವಂಸಕ ಕೃತ್ಯಗಳಿಗೆ ಇನ್ನು ಅವಕಾಶವಿಲ್ಲ. ಭಯೋತ್ಪಾದಕರ ರೌದ್ರಾವತಾರ ಕೊನೆಗಾಣಿಸಲಾಗಿದೆ. ಶಾಂತಿ ಸುವ್ಯವಸ್ಥೆ ಇಲ್ಲಿ ಮನೆ ಮಾಡಲಿದೆ. ನಾಗರಿಕರು ನೆಮ್ಮದಿಯಿಂದ ಬದುಕಬಹುದಾಗಿದೆ. ಈವರೆಗೆ ಮರೀಚಿಕೆಯಾಗಿದ್ದ ಆರ್ಥಿಕ ಅಭಿವೃದ್ಧಿ ನಿಜವಾಗಲಿದೆ. ಮೂಲ ನಿವಾಸಿ ಪಂಡಿತರ ಕುಟುಂಬಗಳು ತಮ್ಮ ಸ್ವಂತ ನೆಲೆಗಳಿಗೆ ಹಿಂತಿರುಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಿಧಾನದ 370ನೇ ವಿಧಿ ಸೇರ್ಪಡೆಗೆ ಸ್ವತಃ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ವಿರೋಧ ವ್ಯಕ್ತಪಡಿಸಿದ್ದರು. ದೇಶದ ಅಖಂಡತೆಗೆ ಇದರಿಂದ ಧಕ್ಕೆ ಆಗಲಿದೆ ಎಂದು ಭಾವಿಸಿದ್ದರು. ಪ್ರಧಾನಿ ಮೋದಿ ಅವರ ಸರ್ಕಾರ ಸಂವಿಧಾನದ 370ನೇ ವಿಧಿ, 35ಎ ಕಲಂ ರದ್ದು ಮಾಡಿದೆ. ಆ ರಾಜ್ಯದ ಸಮಗ್ರ ಅಭಿವೃದ್ಧಿಯಾಗಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲಿದೆ ಎಂದರು.

Advertisement

ಆಸೆ ಈಡೇರಿದೆ: ಪ್ರಧಾನಿ ದಿಟ್ಟ ನಿರ್ಧಾರಕ್ಕೆ ರಾಷ್ಟ್ರ ಮತ್ತು ವಿಶ್ವಾದ್ಯಂತ ಸ್ವಾಗತ ದೊರೆತಿದೆ. ಈ ಚರಿತ್ರಾರ್ಹ ನಿರ್ಧಾರದಿಂದ ಭಾರತೀಯ ಇತಿಹಾಸದಲ್ಲಿ ಮೋದಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ದಿವಂಗತ ಶ್ಯಾಮ್‌ ಪ್ರಸಾದ್‌ ಮುಖರ್ಜಿ, ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ, ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಅಸಂಖ್ಯಾತ ರಾಷ್ಟ್ರಾಭಿಮಾನಿಗಳ ಆಸೆ ನೆರವೇರಿದೆ. ಅಖಂಡ ಭಾರತದ ಪರಿಕಲ್ಪನೆ ಪರಿಪೂರ್ಣವಾದಂತಾಗಿದೆ. ಈ ಅಖಂಡ ಭಾರತದ ಸಮಗ್ರ ಅಭಿವೃದ್ಧಿಗೆ ಅಳಿಲು ಸೇವೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ನಾವು ಇಡುವ ಸಣ್ಣ ಸಣ್ಣ ಹೆಜ್ಜೆಗಳೇ ನಮ್ಮನ್ನು ಗುರಿಯತ್ತ ಕರೆದೊಯ್ಯುತ್ತವೆ ಎಂದು ಪ್ರತಿಪಾದಿಸಿದರು.

ತಾಯಿ ಎದೆ ಹಾಲು ಕುಡಿದ ಗಂಡಸರು ಯಾರಾದರೂ ಇದ್ದರೆ ಶ್ರೀನಗರದ ಲಾಲ್‌ಚೌಕದಲ್ಲಿ ತ್ರಿವರ್ಣಧ್ವಜ ಹಾರಿಸಲಿ ಎಂದು ಉಗ್ರಗಾಮಿಗಳು ಬೆದರಿಕೆ ಒಡ್ಡಿದ್ದ ವೇಳೆ ಅಂದಿನ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಮುರಳಿ ಮನೋಹರ್‌ ಜೋಷಿ ಅವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಶೌರ್ಯ ಮೆರೆದ ಸನ್ನಿವೇಶ ನನ್ನ ಸ್ಮತಿಪಟಲದಲ್ಲಿ ಅಚ್ಚೊತ್ತಿದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next