ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವಾಗ ಕೇಂದ್ರ ಸರ್ಕಾರ ವೆಂಟಿಲೇಟರ್ ರಪ್ತಿಗೆ ಅನುಮತಿ
ನೀಡಿದ್ದು, ಇದು ಹೃದಯ ಹೀನ ಸರ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಪ್ರತಿದಿನ 5,000ಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 80 ರಿಂದ 90 ಜನ ಸಾಯುತ್ತಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನ ಪ್ರಕಾರ ಕೊರೊನಾ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಪ್ತಿಗೆ ಅವಕಾಶ ಕೊಡುತ್ತಿದ್ದಾರಂತೆ, ಇದೊಂದು ಹೃದಯಹೀನ ಸರ್ಕಾರ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ 57,396 ಸಕ್ರಿಯ ಸೋಂಕು ಪ್ರಕರಣಗಳಿವೆ. ಆದರೆ, ಲಭ್ಯ ಇರುವ ವೆಂಟಿಲೇಟರ್‌ಗಳು ಕೇವಲ 801. ಇಡೀ ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಸರ್ಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರ ಕಷ್ಟದ ಕಾಲದಲ್ಲಿ ವಿರೋಧಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೇಳುತ್ತಿದ್ದಾರೆ. ಇಂತಹ ಸಾವು, ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಈ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ ಎಂದಿದ್ದಾರೆ.
ನಮ್ಮಿಂದ ಸಹಕಾರ ನಿರೀಕ್ಷಿಸುವ ಕೇಂದ್ರ ಬಿಜೆಪಿ ಸರ್ಕಾರ, ಕೊರೊನಾ ಕಾಲದಲ್ಲಿ ಮಧ್ಯಪ್ರದೇಶದ ಸರ್ಕಾರಕ್ಕೆ ಬಿಜೆಪಿ ಸಂಸದರು ಯಾಕೆ ಸಹಕಾರ ಕೊಡಲಿಲ್ಲ? ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹೊರಟಿದ್ದು ಯಾಕೆ? ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೋವಿಡ್ ಸಾವು, ನೋವುಗಳಲ್ಲಿ ಮಹಾರಾಷ್ಟ್ರ, ತಮಿಳು
ನಾಡುಗಳನ್ನು ಮೀರಿಸಿ ಕರ್ನಾಟಕ ನಂ.1 ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ ಆಗಲಾರದೇ ಎಂದು ಪ್ರಶ್ನಿಸಿದ್ದಾರೆ. ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟಿಸ್ ಕೊಟ್ಟು ರಾಜ್ಯ ಬಿಜೆಪಿ ಸರ್ಕಾರ ನಮ್ಮ ಕೆಲಸವನ್ನು ಸುಲಭ ಮಾಡಿದೆ.
ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇಬೇಕಲ್ಲಾ? ಕೋರ್ಟ್‌ನಲ್ಲಾದರೂ ನಮ್ಮನ್ನು ಎದುರಿಸಲೇಬೇಕಲ್ಲಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.