ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನಾಸಿಕ್ ನ ಕಲಾರಾಮ್ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. 21.8 ಕಿಲೋಮೀಟರ್ ಉದ್ದದ ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ಉದ್ಘಾಟಿಸುವ ಮೊದಲು ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ಪ್ರಧಾನಿ ಮೋದಿ ಅವರು ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಬಳಿಕ ಸಂತ ಏಕನಾಥ್ ಮರಾಠಿಯಲ್ಲಿ ಬರೆದ ‘ಭಾವಾರ್ಥ ರಾಮಾಯಣ’ ಶ್ಲೋಕಗಳನ್ನು ಆಲಿಸಿದರು.
ಪ್ರಸ್ತುತ ದೇವಾಲಯವನ್ನು ಮೊಘಲರು ನಾಶಪಡಿಸಿದ ನಂತರ 1700 ರಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಭಗವಾನ್ ರಾಮನು ಕೇವಲ 1.5 ನಿಮಿಷಗಳಲ್ಲಿ 14,000 ರಾಕ್ಷಸರನ್ನು ಕೊಂದನೆಂದು ನಂಬಲಾಗಿದೆ. ಶ್ರೀರಾಮನು ರಾಕ್ಷಸರಿಗೆ ‘ಕಾಲ’ (ಸಾವು) ರೂಪನಾಗಿ ಬಂದ ಕಾರಣ ಈ ದೇವಾಲಯವನ್ನು ‘ಕಲರಂ’ ಎಂದು ಕರೆಯಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾಸಿಕ್ ನಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮ ಜಯಂತಿಯ ಕಾರಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿದರು.
ನಂತರ, ನಾಸಿಕ್ ನ ತಪೋವನ ಮೈದಾನದಲ್ಲಿ ರಾಷ್ಟ್ರೀಯ ಯುವ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವಂತೆ ಜನರಿಗೆ ಮನವಿ ಮಾಡಿದರು.