ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆಗಳಾಗಿದ್ದು, ಕರ್ನಾಟಕದ ಮೂವರೂ ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಪ್ರಮುಖ ಖಾತೆಗಳೇ ಸಿಕ್ಕಿವೆ.
ಕರ್ನಾಟಕದಿಂದ ರಾಜ್ಯಸಭೆಗೆ ಪ್ರವೇಶಿಸಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಅತೀ ಪ್ರಮುಖ ಹಣಕಾಸು ಖಾತೆಯನ್ನೇ ನೀಡಲಾಗಿದೆ. ಇನ್ನು ದಿ. ಅನಂತಕುಮಾರ್ ಅವರು ನಿರ್ವಹಿಸುತ್ತಿದ್ದ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಡಿ.ವಿ.ಸದಾನಂದಗೌಡರಿಗೆ ಸಿಕ್ಕಿದ್ದರೆ, ಸಂಸದೀಯ ವ್ಯವಹಾರಗಳ ಖಾತೆ ಪ್ರಹ್ಲಾದ್ ಜೋಶಿ ಅವರಿಗೆ ಲಭಿಸಿದೆ. ಉಳಿದಂತೆ ರೈಲ್ವೆ ಸಹಾಯಕ ಖಾತೆ ಸುರೇಶ್ ಅಂಗಡಿ ಅವರಿಗೆ ಸಿಕ್ಕಿದೆ.
ಅಮಿತ್ ಶಾ ನಂ.2: ಮೋದಿ ಅವರ ಅತ್ಯಾಪ್ತ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೃಹ ಖಾತೆಯ ಹೊಣೆ ನೀಡಲಾಗಿದೆ. ಈ ಮೂಲಕ ಅಧಿಕೃತವಾಗಿ ಸರ್ಕಾರದಲ್ಲಿ ಅವರೇ ನಂ.2 ಆಗಲಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದ್ದರೂ, ಪ್ರಮುಖವಾದ ಖಾತೆಯೇ ಸಿಕ್ಕಿದೆ. ಈ ಹಿಂದೆ ಈ ಖಾತೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಉಸ್ತುವಾರಿ ನೀಡಲಾಗಿದೆ.
ವಿದೇಶಾಂಗ ಅಧಿಕಾರಿ ಟು ಸಚಿವ: ಮೋದಿ ಅವರ ಮೊದಲ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್.ಜೈಶಂಕರ್ ಪ್ರಮುಖ ವಿದೇಶಾಂಗ ಸಚಿವಾಲಯದ ಹೊಣೆ ಹೊತ್ತಿದ್ದಾರೆ. ಇದೇ ಮೊದಲ ಬಾರಿಗೆ ಇದೇ ಸಚಿವಾಲಯದ ಅಡಿಯಲ್ಲಿ ಬರುವ ಅಧಿಕಾರಿಗೆ, ಸಚಿವಾಲಯದ ಉಸ್ತುವಾರಿ ಹೊಣೆಯನ್ನೇ ನೀಡಲಾಗಿದೆ.
ಗೌಡರು, ಜೋಶಿಗೆ ಪ್ರಮುಖ ಸ್ಥಾನ: ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಸದಾನಂದಗೌಡರಿಗೆ ಪ್ರಮುಖವಾದ ರಸಗೊಬ್ಬರ ಖಾತೆ ನೀಡಲಾಗಿದೆ. ಹಾಗೆಯೇ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ಉಸ್ತುವಾರಿ ಸಿಕ್ಕಿದೆ. ಹಿಂದಿನ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಇಲಾಖೆಯ ಹೊಣೆ ಹೊತ್ತಿದ್ದು ದಿ.ಅನಂತಕುಮಾರ್ ಅವರು. ಎಲ್ಲಾ ಪಕ್ಷಗಳ ಜತೆಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದರಿಂದ ಅನಂತಕುಮಾರ್ ಅವರಿಗೆ ಈ ಜವಾಬ್ದಾರಿ ಸಿಕ್ಕಿತ್ತು. ಇದೀಗ ಇದೇ ಪ್ರಮುಖ ಖಾತೆ ಪ್ರಹ್ಲಾದ್ ಜೋಶಿ ಅವರಿಗೆ ಒಲಿದಿದೆ.
ಗಡ್ಕರಿ, ಸ್ಮತಿ ಮುಂದುವರಿಕೆ: ಉಳಿದಂತೆ ಸ್ಮತಿ ಇರಾನಿಗೆ ವಸತಿ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜವಾಬ್ದಾರಿ ನೀಡಿದ್ದರೆ, ಗಡ್ಕರಿ ಅವರನ್ನು ಹಿಂದಿನ ಹೆದ್ದಾರಿ ಮತ್ತು ಸಾರಿಗೆ ಖಾತೆಯಲ್ಲೇ ಮುಂದುವರಿಸಲಾಗಿದೆ. ಪಿಯೂಶ್ ಗೋಯಲ್ ರೈಲ್ವೆ ಇಲಾಖೆಗೆ ಮರಳಿದ್ದಾರೆ.
ಮೊದಲ ಹಣಕಾಸು ಸಚಿವೆ ನಿರ್ಮಲಾ
ಮಹತ್ವದ ವಿಚಾರವೆಂದರೆ, ನಿರ್ಮಲಾ ಸೀತಾರಾಮನ್ ದೇಶದಲ್ಲೇ ಮೊದಲ ಬಾರಿಗೆ ಪೂರ್ಣಾವಧಿಗೆ ಹಣಕಾಸು ಹೊಣೆ ಹೊತ್ತ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅವರು ಕೆಲ ಅವಧಿಗೆ ಹಣಕಾಸು ಇಲಾಖೆಯ ಹೊಣೆ ಹೊತ್ತಿದ್ದರು. ಅದನ್ನು ಬಿಟ್ಟರೆ ಮಹಿಳೆಯೊಬ್ಬರು ಈ ಖಾತೆ ನಿರ್ವಹಣೆ ಮಾಡುತ್ತಿರುವುದು ಇದೇ ಮೊದಲು.