ನವದೆಹಲಿ: ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಇಂದು 64 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ದಿನದಂದು ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರಿಗೆ ಕನ್ನಡದಲ್ಲೇ ಟ್ವೀಟ್ ಮಾಡಿ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರಿರುವುದರಿಂದ ಸಾಕಷ್ಟು ಜನರು ರೀ ಟ್ವೀಟ್ ಮಾಡುತ್ತಿದ್ದು ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಕೇಳುವುದೇ ಚೆಂದ ಮೋದಿ ಅವರೇ, ನೀವು ಹೇಳಿದ ಹಾಗೆ ಕರ್ನಾಟಕ ವಿಶಾಲ ಹೃದಯ ಉಳ್ಳ ಹೆಮ್ಮೆಯ ಕನ್ನಡಿಗರ ನಾಡು ಎಂದು ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿದ್ದಾರೆ.