ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ರೈಲುಗಳಿಗೆ ಚಾಲನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸಧ ತೇಜಸ್ವಿ ಸೂರ್ಯ, ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಆರಕ್ಷಕ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್, ಬೆಂಗಳೂರು ಆರಕ್ಷಕ ಆಯುಕ್ತ ಪ್ರತಾಪ್ ರೆಡ್ದಿ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಧಾನಿ ಮೋದಿ ಅವರು ಬೆಳಗ್ಗೆ 10.30ಕ್ಕೆ ವಿಧಾನಸೌಧ ಆವರಣ- ಶಾಸಕರ ಭವನದ ಬಳಿ ಇರುವ ಕನಕದಾಸ ಪ್ರತಿಮೆ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ 10.42ರ ಸುಮಾರಿಗೆಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್)ದಲ್ಲಿ ದಕ್ಷಿಣ ಭಾರತದ ಮೊದಲು “ವಂದೇ ಭಾರತ್’ ರೈಲು ಮತ್ತು ಬೆಂಗಳೂರಿನಿಂದ ಕಾಶಿಗೆ ತೆರಳುವ ಭಾರತ್ ಗೌರವ್ “ಕಾಶಿ ದರ್ಶನ್’ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಇದಾದ ಬಳಿಕ 11.50ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ ಮಾಡಲಿದ್ದು, 12.10ಕ್ಕೆ ಸರಿಯಾಗಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಹಾಗೂ ಅಮೃತ್ 2.0 ಯೋಜನೆಗೆ ಚಾಲನೆ ನೀಡಲಿದ್ದಾರೆ.
12.50 ಕ್ಕೆ ಸರಿಯಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.