Advertisement

ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿ ಫೋಟೋ!

02:46 AM Feb 16, 2021 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿ! ಇಂಥದ್ದೊಂದು ಅಪೂರ್ವ ದಾಖಲೆಯನ್ನು ಇಸ್ರೋ ಈ ಮಾಸಾಂತ್ಯದಲ್ಲಿ ಬರೆಯಲಿದೆ. ಇಸ್ರೋ ಪಿಎಸ್ಎಲ್‌ವಿ ಮೂಲಕ ಫೆ. 28ರಂದು ಬಾಹ್ಯಾಕಾಶಕ್ಕೆ ಉಪಗ್ರಹ ಹಾರಿಬಿಡುತ್ತಿದ್ದು, ಇದು ಭಗವದ್ಗೀತೆ ಮತ್ತು ಪ್ರಧಾನಿ ಮೋದಿ ಫೋಟೋವನ್ನು ನಭಕ್ಕೆ ಒಯ್ಯಲಿದೆ.

Advertisement

ಸ್ಪೇಸ್‌ಕಿಡ್ಸ್‌ ಇಂಡಿಯಾ ಅಭಿವೃದ್ಧಿಪಡಿಸಿರುವ ಈ ನ್ಯಾನೋ ಉಪಗ್ರಹವನ್ನು ಶಾಲಾ ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಾರಿಬಿಡಲಾಗುತ್ತಿದೆ.

ಮೋದಿ ಫೋಟೋ, ಭಗವದ್ಗೀತೆ ಏಕೆ?: “ಬಾಹ್ಯಾಕಾಶದಲ್ಲಿ ನಿಯೋಜನೆಗೊಳ್ಳಲಿರುವ ನಮ್ಮ ಚೊಚ್ಚಲ ಉಪಗ್ರಹವಿದು’ ಎಂದು ಸ್ಪೇಸ್‌ ಕಿಡ್ಸ್‌ ಇಂಡಿಯಾ ಸಿಇಒ ಡಾ| ಕೇಸನ್‌ ಹರ್ಷ ವ್ಯಕ್ತಪಡಿಸಿದ್ದಾರೆ. “ವಿಶ್ವದ ಹಲವು ಉಪಗ್ರಹಗಳು ಬಾಹ್ಯಾಕಾಶಕ್ಕೆ ಧರ್ಮಗ್ರಂಥ ಬೈಬಲ್‌ ಹೊತ್ತೂಯ್ದ ನಿದರ್ಶನಗಳಿವೆ. ಹಾಗೆಯೇ ನಮ್ಮ ಉಪಗ್ರಹ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಹೊತ್ತೂಯ್ಯಲಿದೆ. ಆತ್ಮನಿರ್ಭರ ಮಿಷನ್‌ ಅಡಿಯಲ್ಲಿ ಉಪಗ್ರಹ ನಿರ್ಮಾಣವಾಗಿರುವ ಕಾರಣ, ಪ್ರಧಾನಿ ಮೋದಿ ಅವರ ಭಾವ ಚಿತ್ರವನ್ನು ನಭದಲ್ಲಿ ಸ್ಥಾಪಿಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಬೇರೆ ವಿಶೇಷಗಳು: ಒಂದೇ ವಾರದಲ್ಲಿ 25 ಸಾವಿರ ಮಂದಿಯ ಹೆಸರು ಆಹ್ವಾನಿಸಿ, ಉಪಗ್ರಹದೊಳಕ್ಕೆ ದಾಖಲಿಸಲಾಗಿದೆ. ಇದರಲ್ಲಿ 1,000 ಅನಿವಾಸಿ ಭಾರತೀಯರ ಹೆಸರುಗಳಿವೆ. ಚೆನ್ನೈನ ಶಾಲೆಯೊಂದರ ಎಲ್ಲ ಮಕ್ಕಳ ಹೆಸರನ್ನೂ ಬಳಸಿಕೊಳ್ಳಲಾಗಿದೆ ಎಂದು ಕೇಸನ್‌ ತಿಳಿಸಿದ್ದಾರೆ.

ಗಗನ ಯಾನ ಕೇವಲ ಮುನ್ನುಡಿ
“ಬಾಹ್ಯಾಕಾಶದಲ್ಲಿ ಮಾನವನ ಉಪಸ್ಥಿತಿಗೆ ಗಗನಯಾನ ಒಂದು ಆರಂಭವಷ್ಟೇ!’ - ಹೀಗೆಂದು ಕೇಂದ್ರ ಬಾಹ್ಯಾಕಾಶ ಇಲಾಖೆ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತಾಗಿ ಸಿದ್ಧಪಡಿಸಿರುವ ಕರಡು ವರದಿಯಲ್ಲಿ ತಿಳಿಸಿದೆ. “ಮಾನವಸಹಿತ ಗಗನಯಾನ ಯೋಜನೆ ಬಹುಕಾಲದವರೆಗೆ ದೇಶಕ್ಕೆ ಹಲವು ಪ್ರಯೋಜನಗಳನ್ನು ನೀಡಲಿದೆ’ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next