Advertisement

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

12:12 AM Sep 19, 2020 | mahesh |

ಪುತ್ತೂರು: ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ)ಯಡಿ 2020-21ನೇ ಸಾಲಿನಲ್ಲಿ ರಾಜ್ಯದ ಪ್ರತೀ ಗ್ರಾಮ ಪಂಚಾಯತ್‌ಗೆ 20 ಮನೆ ನಿರ್ಮಾಣ ಗುರಿ ನಿಗದಿಪಡಿಸಿದ್ದು, ಯೋಜನೆಗೆ ಮರುಜೀವ ದೊರಕಲಿದೆ. ಬದಲಾದ ಸರಳ ಮಾನದಂಡಗಳೊಂದಿಗೆ ಅರ್ಹರ ಪಟ್ಟಿ ತಯಾರಿಗೆ ಸಿದ್ಧತೆ ನಡೆಯುತ್ತಿದೆ. ಪ್ರತೀ ಗ್ರಾ.ಪಂ. ವ್ಯಾಪ್ತಿ ಯಲ್ಲಿ 2020-21ನೇ ಸಾಲಿ ನಲ್ಲಿ ತಲಾ 20 ಮನೆಗಳು ನಿರ್ಮಾಣ ಗೊಳ್ಳಲಿವೆ. ಇದು ವಸತಿ ಸಮಸ್ಯೆ ಬಗೆಹರಿಸುವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗಳು ಚಿಗಿತು ಕೊಂಡು ಆರ್ಥಿಕತೆಗೂ ವೇಗೋತ್ಕರ್ಷ ಒದಗಿಸಲಿದೆ.

Advertisement

ಎರಡು ವರ್ಷಗಳಿಂದ ವಸತಿ ಸಹಾಯಧನ, ಮನೆ ಮಂಜೂರಾತಿ ಸ್ಥಗಿತಗೊಂಡಿತ್ತು. ಈಗ ಹೊಸದಾಗಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದ್ದು, ಬಡವರ ಮನೆಯ ಕನಸಿಗೆ ಮರುಜೀವ ಲಭಿಸಲಿದೆ. ಅರ್ಹ ಫಲಾನು ಭವಿಗಳ ಪಟ್ಟಿ ಅಂತಿಮಗೊಳಿಸಿ ಜಿಲ್ಲಾ ಪಂಚಾಯತ್‌ ಮೂಲಕ ಸರಕಾರಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ 20 ಮನೆಗಳಲ್ಲಿ ಶೇ. 65ನ್ನು ಪರಿಶಿಷ್ಟ ಜಾತಿ-ಪಂಗಡಕ್ಕೆ, ಶೇ. 25 ಸಾಮಾನ್ಯ ವರ್ಗಕ್ಕೆ, ಶೇ. 15ನ್ನು ಅಲ್ಪಸಂಖ್ಯಾಕರಿಗೆ ಒದಗಿಸುವಂತೆ ತಿಳಿಸಲಾಗಿದೆ. ವಸತಿ ನಿರ್ಮಾಣಕ್ಕೆ ಎಸ್‌ಸಿ-ಎಸ್‌ಟಿ ಫಲಾನುಭವಿಗೆ ತಲಾ 1.50 ಲ. ರೂ. ಮತ್ತು ಇತರರಿಗೆ ತಲಾ 1.20 ಲಕ್ಷ ರೂ. ಸಹಾಯಧನ ಪಾವತಿಸಲಾಗುತ್ತದೆ.

ಶಾಸಕರಿಗೆ ಆಯ್ಕೆಯ ಹೊಣೆ
ಫಲಾನುಭವಿಗಳ ಗುರುತಿಸುವಿಕೆ ಗ್ರಾ.ಪಂ. ಪಿಡಿಒ, ತಾ.ಪಂ. ಇಒ ಮೂಲಕ ನಡೆದು ಶಾಸಕರ ಅಧ್ಯಕ್ಷತೆಯಲ್ಲಿ ಅರ್ಹರ ಪಟ್ಟಿ ಅಂತಿಮಗೊಳ್ಳಲಿದೆ. ಅನಂತರ ಆ ಪಟ್ಟಿಯನ್ನು ಜಿ.ಪಂ. ಮೂಲಕ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಹಿಂದೆ ಸಿದ್ಧಪಡಿಸಿದ ವಸತಿರಹಿತರ ಪಟ್ಟಿಯ ಫಲಾನುಭವಿಗಳ ಜತೆಗೆ ಅರ್ಹರು ಬಿಟ್ಟು ಹೋಗಿದ್ದಲ್ಲಿ ಅವರನ್ನು ಸೇರಿಸಿ ಪಟ್ಟಿ ತಯಾರಿಸಲಾಗುತ್ತಿದೆ. ಆಯಾ ತಾ.ಪಂ. ವಸತಿ ನೋಡಲ್‌ ಅಧಿಕಾರಿಗಳು ಪಿಡಿಒಗಳ ಮೂಲಕ ಪಟ್ಟಿ ತಯಾರಿ ಪ್ರಕ್ರಿಯೆ ಆರಂಭಿಸಿದ್ದಾರೆ.

ನಿಯಮ ಸರಳ
2019-20ರಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಪ್ರತೀ ಗ್ರಾ. ಪಂ. ವ್ಯಾಪ್ತಿಯಲ್ಲಿ 20 ಮನೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತಾದರೂ ಜಾರಿಯಾಗಿರಲಿಲ್ಲ. ಆಗ ಎಸ್‌ಸಿಸಿಟಿ ಡಾಟಾ ಪ್ರಕಾರ ಕೇಂದ್ರ ಸರಕಾರ ನೀಡಿದ್ದ ಮಾನದಂಡದಲ್ಲೇ ಫಲಾನುಭವಿಗಳ ಆಯ್ಕೆ ನಡೆಸಬೇಕಿತ್ತು. ಹೀಗಾಗಿ ಮಾನದಂಡಗಳ ಅನುಸಾರ ಫಲಾನುಭವಿಗಳ ಆಯ್ಕೆ ಸಾಧ್ಯವಾಗಿರಲಿಲ್ಲ. ಉದಾಹರಣೆಗೆ, ಇಂತಿಷ್ಟೇ ಆದಾಯ ಮಿತಿ, ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ಗುರುತಿಸಲಾದ ವಸತಿ ರಹಿತರ ಸಮೀಕ್ಷೆ ಪಟ್ಟಿಯಲ್ಲಿ ಕಡ್ಡಾಯವಾಗಿ ಸೇರಿರಬೇಕೆಂಬ ನಿಬಂಧನೆಗಳು ಆಗ ಇದ್ದವು. ಈ ಬಾರಿ ನಿಯಮದಲ್ಲಿ ಬದಲಾವಣೆ ಮಾಡಿ ಸರಳಗೊಳಿಸಲಾಗಿದ್ದು, ಅರ್ಹರ ಆಯ್ಕೆಯ ಮಾನದಂಡ ಪ್ರಕ್ರಿಯೆಯ ಅಧಿಕಾರವನ್ನು ಆಯಾ ಜಿ.ಪಂ. ವ್ಯಾಪ್ತಿಯೊಳಗೆ ನೀಡಲಾಗಿದೆ ಎನ್ನುತ್ತಾರೆ ದ.ಕ. ಜಿ.ಪಂ. ವಸತಿ ವಿಭಾಗದ ಅಧಿಕಾರಿ.

Advertisement

ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿದೆ. ಪಟ್ಟಿ ಸರಕಾರಕ್ಕೆ ಸಲ್ಲಿಕೆಯಾದ ಬಳಿಕ ಪ್ರಕ್ರಿಯೆ ಆರಂಭಗೊಳ್ಳಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಮನೆಗಳ ನಿರ್ಮಾಣ ಗುರಿ ನೀಡಲಾಗಿದ್ದು, ಅರ್ಹರ ಗುರುತಿಸುವಿಕೆ ಪ್ರಗತಿಯಲ್ಲಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಅರ್ಹರ ಪಟ್ಟಿ ಅಂತಿಮ ಗೊಂಡು ಸರಕಾರಕ್ಕೆ ಸಲ್ಲಿಕೆ ಆಗಲಿದೆ.
– ಆರ್‌. ಮಧುಕುಮಾರ್‌, ಯೋಜನಾ ನಿರ್ದೇಶಕರು, ದ.ಕ. ಜಿ.ಪಂ.

 

Advertisement

Udayavani is now on Telegram. Click here to join our channel and stay updated with the latest news.

Next