Advertisement

ಪ್ರಧಾನಿ 100% ಕಮಿಷನ್‌ ಏಜೆಂಟ್‌: ದಿನೇಶ್‌ ಗುಂಡೂರಾವ್‌

12:36 AM Apr 13, 2019 | Lakshmi GovindaRaju |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 100% ಕಮಿಷನ್‌ ಏಜೆಂಟ್‌ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ರಾಜ್ಯ ಸರ್ಕಾರ ಹತ್ತು ಪರ್ಸೆಂಟ್‌, ಇಪ್ಪತ್ತು ಪರ್ಸೆಂಟ್‌ ಸರ್ಕಾರ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ರಫೇಲ್‌ ಡೀಲ್‌ನಲ್ಲಿ ಪ್ರಧಾನಿಯೇ ಮಧ್ಯವರ್ತಿಯಾಗಿದ್ದು, ಅವರೇ 100% ಕಮಿಷನ್‌ ಪಡೆದುಕೊಂಡಿದ್ದಾರೆ.

ಅವರಿಗೆ ಯಾವುದೇ ಮಧ್ಯವರ್ತಿಗಳು ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೈಸೂರಿಗೆ ಬಂದು ಅಂಬರೀಶ್‌ ಅವರನ್ನು ಸ್ಮರಣೆ ಮಾಡಿ, ಮಂಡ್ಯದ ಪಕ್ಷೇತರ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಬಿಜೆಪಿ ಸಂಘಟಿಸಿ ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರ್‌ ಅವರ ಬಗ್ಗೆ ಯಾಕೆ ಸ್ಮರಣೆ ಮಾಡುತ್ತಿಲ್ಲ? ಅಂಬರೀಶ್‌ ಜಾತ್ಯತೀತ ವ್ಯಕ್ತಿಯಾಗಿದ್ದರು. ಅವರು ಯಾವತ್ತೂ ಕೋಮುವಾದಿಗಳ ಪರವಾಗಿರಲಿಲ್ಲ. ಅವರ ಸ್ಮರಣೆ ಮಾಡುವ ಉದ್ದೇಶ ಏನು ಎಂದು ಪ್ರಧಾನಿ ರಾಜ್ಯದಲ್ಲಿ ಪ್ರಚಾರ ಮಾಡುವಾಗ ಉತ್ತರಿಸಬೇಕು ಎಂದು ಹೇಳಿದರು.

ಟಿಪ್ಪು ಜಯಂತಿಗೆ ತೋರಿದ ಉತ್ಸಾಹ ಹಂಪಿ ಉತ್ಸವಕ್ಕೆ ತೋರಿಲ್ಲ ಎಂದು ಪ್ರಧಾನಿ ಮಾಡಿರುವ ಆರೋಪ ತಳ್ಳಿ ಹಾಕಿದ ದಿನೇಶ್‌, ಕಾಂಗ್ರೆಸ್‌ ಅವಧಿಯಲ್ಲಿ ಅತಿ ಹೆಚ್ಚು ಮಹಾಪುರುಷರ ಜಯಂತಿಗಳನ್ನು ಆಚರಿಸಿದ್ದೇವೆ. ಮೋದಿಗೆ ಯಾವುದೇ ವಿಷಯವಿಲ್ಲ.

Advertisement

ಹೀಗಾಗಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಮಾಧ್ಯಮಗಳನ್ನು ದುರುಪಯೋಗ ಪಡೆಸಿಕೊಂಡು ನ್ಯಾಯ ಸಮ್ಮತ ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಡೈರಿ ಬಗ್ಗೆ ತನಿಖೆಯಾಗಲಿ: ಯಡಿಯೂರಪ್ಪ ಅವರ ಪಿಎ ಡೈರಿ ತೆಗೆದುಕೊಳ್ಳಲು ಈಶ್ವರಪ್ಪ ಅವರ ಪಿಎಯನ್ನು ಕಿಡ್ನಾéಪ್‌ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಅದರ ಆಧಾರದಲ್ಲಿ ಈಶ್ವರಪ್ಪ ಅವರ ಪಿಎಗೆ ದಾಖಲೆಗಳನ್ನು ಒದಗಿಸುವಂತೆ ಪೊಲೀಸರು ಸೂಚಿಸಿದ್ದರು.

ಈಗ ವಿನಯ್‌ ತಮಗೆ ರಕ್ಷಣೆ ನೀಡುವಂತೆ ಕೇಳಿದ್ದಾರೆ. ಪೊಲೀಸರು ಅವರಿಗೆ ರಕ್ಷಣೆ ನೀಡಿ, ಡೈರಿ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಆ ಡೈರಿ ಸ್ಫೋಟಕ ವಿಷಯಗಳನ್ನು ಹೊಂದಿದೆ. ಅದರಲ್ಲಿ ಯಡಿಯೂರಪ್ಪ ಅವರ ಹಸ್ತಾಕ್ಷರ ಇದೆ ಎಂಬ ಮಾಹಿತಿ ಇದೆ. ಹೀಗಾಗಿ ವಿನಯ್‌ಗೆ ರಕ್ಷಣೆ ನೀಡಿ ಡೈರಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಐಟಿ ಇಲಾಖೆ ಮುಖ್ಯಸ್ಥರ ವರ್ಗಾವಣೆಗೆ ಆಯೋಗಕ್ಕೆ ಪತ್ರ: ರಾಜ್ಯದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಮನೆಗಳ ಮೇಲೆಯೇ ದಾಳಿ ನಡೆಸಿ ತೊಂದರೆ ಕೊಡುತ್ತಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಅವರು ಇನ್ನೂ ಏನೇನು ಅನಾಹುತ ಮಾಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪ ಡೈರಿಯ ಬಗ್ಗೆ ಯಾರೂ ಮಾಹಿತಿ ಕೇಳದೇ ಅವರೇ ಸ್ವಯಂಪ್ರೇರಿತರಾಗಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದರು.

ಆದಾಯ ತೆರಿಗೆ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್‌ ಬಂದಿದೆ. ಆ ನೋಟಿಸ್‌ಗೆ ಕಾನೂನು ಪ್ರಕಾರ ಉತ್ತರ ನೀಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ನಾವು ಯಾರ ವಿರುದ್ಧವೂ ವಯಕ್ತಿಕವಾಗಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದರು.

ಹಿಂದೆ ಯುಪಿಎ ಅವಧಿಯಲ್ಲಿ 2ಜಿ, ಬೊಫೋರ್ಸ್‌ ಹಗರಣ ಆದಾಗ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು. ಆದರೆ, ರಫೇಲ್‌ ಡೀಲ್‌ ಬಗ್ಗೆ ತನಿಖೆ ಮಾಡಲು ಜೆಪಿಸಿಗೆ ಕೊಡಲು ಪ್ರಧಾನಿ ಏಕೆ ಹಿಂದೇಟು ಹಾಕುತ್ತಿದ್ದೀರಿ, ಭಯೋತ್ಪಾದಕರಿಗೆ ಭಯ ಹುಟ್ಟಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಅವಧಿಯಲ್ಲಿ 495 ಯೋಧರು, 278 ನಾಗರಿಕರು ಸಾವಿಗೀಡಾಗಿದ್ದಾರೆ.

524 ಯುವಕರು ಉಗ್ರಗಾಮಿಗಳಾಗಿ ಪರಿವರ್ತನೆಯಾಗಿದ್ದಾರೆ. ಪಾರ್ಲಿಮೆಂಟ್‌ ದಾಳಿ, ಮಸೂದ್‌ ಅಝರ್‌ನನ್ನು ಬಿಡುಗಡೆ ಮಾಡಿರುವುದು, ಉರಿ, ಫ‌ುಲ್ವಾಮಾ ದಾಳಿ ಎಲ್ಲವೂ ನಿಮ್ಮ ಅವಧಿಯಲ್ಲಿಯೇ ಆಗಿವೆ. ನೀವು ಯಾರಿಗೆ ಭಯ ಹುಟ್ಟಿಸಿದ್ದೀರಿ ಎಂದು ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಅಲ್ಪ ಸಂಖ್ಯಾತರಿಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯವರು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಹಿಂದುಳಿದ ವರ್ಗದವರಿಗೆ ಒಂದೂ ಕ್ಷೇತ್ರದಲ್ಲಿ ಟಿಕೆಟ್‌ ನೀಡದೇ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ.

ಅದರ ಬದಲು ಪ್ರಚೋದನಕಾರಿ ಭಾಷಣ ಮಾಡಿ, ಸುಳ್ಳು ಪ್ರಚಾರ ಮಾಡಿ, ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೇ ತಪ್ಪಿಸಿಕೊಂಡು ಹೋಗುತ್ತಿದ್ದೀರಾ. ನಿಮಗೆ ಉತ್ತರ ಕೊಡುವ ನೈತಿಕತೆಯಿಲ್ಲ. ರಾಜ್ಯದ ಜನತೆ ಪರವಾಗಿ ಕಾಂಗ್ರೆಸ್‌ ಪ್ರಶ್ನಿಸುತ್ತಿದ್ದು, ಮೋದಿ ಮಂಗಳೂರಿಗೆ ಬಂದಾಗ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next