ದಾವಣಗೆರೆ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣ ಉಳಿಸುವಂತಹ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ, ಜಾಗೃತಿಯ ಅಗತ್ಯ ಇದೆ ಎಂದು ಜೆ.ಜೆ. ಎಂ. ವೈದ್ಯಕೀಯ ಮಹಾವಿದ್ಯಾಲಯದ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ| ಆರ್. ರವಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ… ವಿಷಯ ಕುರಿತ ಪ್ರಾಯೋಗಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ವೈದ್ಯರು, ಸಾರ್ವಜನಿಕರು, ಪೊಲೀಸರಾದಿಯಾಗಿ ಅಪಘಾತದಲ್ಲಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಸಾವಿರಾರು ಜನರ ಅತ್ಯಮೂಲ್ಯ ಪ್ರಾಣ ಉಳಿಸುವರು.
ಪ್ರತಿಯೊಬ್ಬರಿಗೆ ಪ್ರಾಥಮಿಕ ಚಿಕಿತ್ಸೆ, ಕ್ರಮಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ನಮ್ಮಲ್ಲಿ ಅಂತಹ ವಾತಾವರಣ ಇಲ್ಲ ಎಂದು ತಿಳಿಸಿದರು. ಅಪಘಾತದಲ್ಲಿ ಗಾಯಗೊಂಡವರ ಹೃದಯಬಡಿತ, ರಕ್ತಸಂಚಲನೆ, ಉಸಿರಾಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಹೃದಯಕ್ಕೆ ರಕ್ತ ಸಂಚಲನೆ ಆಗುವುದು 4-6 ನಿಮಿಷ ತಡವಾದಲ್ಲಿ ಮೆದುಳು ನಿಷ್ಕಿಯವಾಗುತ್ತದೆ.
ಮೆದುಳು ನಿಷ್ಕಿಯವಾಗದಂತೆ ಆಮ್ಲಜನಕ, ಉಸಿರಾಟದ ವ್ಯವಸ್ಥೆ ಮಾಡಬೇಕು. ಅದನ್ನು ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಮಿನಿಟ್ ಎನ್ನಲಾಗುತ್ತದೆ. ಆ ಗೋಲ್ಡನ್ ಮಿನಿಟ್‌ನಲ್ಲಿ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣ ರಕ್ಷಣೆ ಮಾಡಬಹುದು ಎಂದು ತಿಳಿಸಿದರು. ಅಪಘಾತದಲ್ಲಿ ಸ್ಥಳದಲ್ಲಿ ಅತ್ಯಗತ್ಯವಾದ ಪ್ರಾಥಮಿಕ ಚಿಕಿತ್ಸೆ ನೀಡುವ ಜೊತೆಗೆ ಕೂಡಲೇ ಆಸ್ಪತ್ರೆಗೆ ಸಾಗಿಸುವಂತಾಗಬೇಕು.
ಸಕಾಲದಲ್ಲಿ ಸೂಕ್ತ ಪ್ರಾಥಮಿಕ ಚಿಕಿತ್ಸೆ ಕೊಡುವ ಮೂಲಕ ಸಾವಿರಾರು ಜನರ ಪ್ರಾಣ ಉಳಿಸಬಹುದು. ಪ್ರಾಥಮಿಕ ಚಿಕಿತ್ಸಾ ಕ್ರಮಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ, ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ 2016 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 304 ಜನರು ಸಾವನ್ನಪ್ಪಿದ್ದರೆ, ನೂರಾರು ಜನರು ಗಾಯಗೊಂಡಿದ್ದಾರೆ.
ಚಾಲಕರ ನಿರ್ಲಕ್ಷ, ತಾಂತ್ರಿಕ ದೋಷ ಹೀಗೆ ಯಾವುದೇ ಕಾರಣದಿಂದಲೇ ಆಗಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಕಾಲಿಕವಾಗಿ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸುವಂತಾಗಬೇಕು ಎಂದು ತಿಳಿಸಿದರು. ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ ನೀಡುವ ಸಮಯ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಅವರ್. ಆ ಅವಧಿಯಲ್ಲಿ ಗಾಯಕ್ಕೆ ತುತ್ತಾದವರ ಉಸಿರಾಟ, ಹೃದಯ ಬಡಿತ, ರಕ್ತ ಸಂಚಲನೆ ಸರಾಗವಾಗಿರುವಂತೆ ನೋಡಿಕೊಳ್ಳಬೇಕು.
ಪ್ರಾಥಮಿಕ ಚಿಕಿತ್ಸಾ ಕ್ರಮಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯುವಂತಾಗಬೇಕು ಎಂದರು. ಜೆ.ಜೆ. ಎಂ. ವೈದ್ಯಕೀಯ ಮಹಾವಿದ್ಯಾಲಯದ ಡಾ| ಶಿಲ್ಪಾ ಮಾತನಾಡಿ, ಅಪಘಾತದ ನಂತರ ಪ್ರಾಥಮಿಕ ಚಿಕಿತ್ಸೆ ಕೊಡುವಂತದ್ದು ಜೀವ ಉಳಿಸುತ್ತದೆ. ಸಾರ್ವಜನಿಕರು ಹೆಚ್ಚಿನ ಮಟ್ಟದಲ್ಲಿ ಪ್ರಾಥಮಿಕ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಆಶಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ, ಡಾ| ಅನಿತಾ ಇದ್ದರು.