ಧಾರವಾಡ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 9ರಂದು ಬೆಳಗ್ಗೆ 10:30 ಗಂಟೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದು ಅಖೀಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಆ ದಿನ ಸಾಮೂಹಿಕ ರಜೆ ಹಾಕಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಸರಕಾರದಿಂದ ಸ್ಪಂದನೆ ದೊರೆಯದಿದ್ದರೆ ಸೆ. 5ರಂದು ವಿಧಾನಸೌಧ ಚಲೋಗೆ ಚಾಲನೆ ನೀಡಲಾಗುವುದು ಎಂದರು.
ಧಾರವಾಡ ಜಿಲ್ಲಾ ಕೇಂದ್ರದ ರ್ಯಾಲಿಗೆ ಸರಕಾರಿ ನೌಕರರ ಭವನದಿಂದ ಚಾಲನೆ ದೊರೆಯಲಿದ್ದು, ಡಿಸಿ ಕಚೇರಿವರೆಗೆ ಜರುಗಲಿದೆ. ಡಿಸಿ ಕಚೇರಿ ಎದುರು ಕೆಲಹೊತ್ತು ಧರಣಿ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ವೇತನ ಶ್ರೇಣಿ ನಿಗದಿಪಡಿಸುವುದು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸುವುದು, 3 ವರ್ಷದ ಒಟ್ಟು ಶೇಕಡಾವಾರು ಪರಿಗಣಿಸಿ ವರ್ಗಾವಣೆ ಪ್ರಕ್ರಿಯೆ ತಕ್ಷಣ ಪ್ರಾರಂಭಿಸುವುದು, ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಬಹುಭಾಷೆಯಲ್ಲಿ ಪ್ರಾರಂಭಿಸುವುದು, ಹೆಚ್ಚುವರಿ ಶಿಕ್ಷಕರ ನ್ಯೂನತೆ ಸರಿಪಡಿಸುವುದು, 6ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವರ್ಷದ ಆರ್ಥಿಕ ಬಡ್ತಿ ನೀಡುವುದು ಹಾಗೂ ಗ್ರಾಮೀಣ ಕೃಪಾಂಕ ಶಿಕ್ಷಕರ/ನೌಕರರ ಸಮಸ್ಯೆಗಳನ್ನು ನಿವಾರಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.