Advertisement

Promotion: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ

02:59 PM Jan 11, 2024 | Team Udayavani |

ಚಿಕ್ಕಬಳ್ಳಾಪುರ: ಸರಿ ಸುಮಾರು ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಮುಖ್ಯ ಶಿಕ್ಷಕರಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಕೊನೆಗೂ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿದೆ.

Advertisement

2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಕ್ಕೆ ಬಡ್ತಿ ನೀಡಲು ರಾಜ್ಯ ಶಿಕ್ಷಣ ಇಲಾಖೆ ಆಯುಕ್ತರು ವೇಳಾ ಪಟ್ಟಿ ಪ್ರಕಟಿಸಿದೆ.

ಶಿಕ್ಷಕರಲ್ಲಿ ಸಂತಸ: ವೇಳಾಪಟ್ಟಿಯಂತೆ ಜಿಲ್ಲೆಯಲ್ಲಿ ಬಡ್ತಿಗೆ ಅರ್ಹರಿರುವ ಜೇಷ್ಠತಾ ನಿಯಮಾನುಸಾರ ವೇಳಾ ಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯ ಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.

ವರ್ಷದಲ್ಲಿ ಎರಡು ಬಾರಿ ಅಥವಾ ಕನಿಷ್ಠ ಒಮ್ಮೆಯಾದರೂ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಬಡ್ತಿಗೆ ಕೌನ್ಸಿಲಿಂಗ್‌ ಮಾಡಬೇಕು. ಆದರೆ ಕಳೆದ ಒಂದೂವರೆ ವರ್ಷದಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಬಡ್ತಿ ಸಿಗದೇ ಕೆಲವರು ವಯೋ ನಿವೃತ್ತಿ ಹೊಂದಿ ಬಡ್ತಿ ಸೌಲಭ್ಯದಿಂದ ವಂಚಿರಾದರು. ಸರ್ಕಾರದ ಮೇಲೆ ಇತ್ತೀಚೆಗೆ ಶಿಕ್ಷಕರ ಸಂಘಟನೆಗಳು ಒತ್ತಡ ಹಾಕಿದ ಪರಿಣಾಮ ಕೊನೆಗೂ ಶಿಕ್ಷಣ ಇಲಾಖೆ ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಮುಖ್ಯ ಶಿಕ್ಷಕ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಲು ವೇಳಾ ಪಟ್ಟಿ ಪ್ರಕಟಿಸಿದ್ದು, ಬಡ್ತಿ ನಿರೀಕ್ಷೆಯಲ್ಲಿರುವ ಜಿಲ್ಲೆಯ ಅಸಂಖ್ಯಾತ ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.

ಬಡ್ತಿ ಪ್ರಕ್ರಿಯೆಗೆ ವೇಳಾ ಪಟ್ಟಿ :

Advertisement

 ಜ. 12 ಬಡ್ತಿಗೆ ಅರ್ಹರಿರುವ ಶಿಕ್ಷಕರ ತಾತ್ಕಲಿಕ ಅಂತಿಮ ಪಟ್ಟಿ ಪ್ರಕಟ.

 ಜ.17 ದೈಹಿಕ ಅಂಗವಿಕಲ ಶಿಕ್ಷಕರು ಮೀಸಲಾತಿಗೆ ಮನವಿ ಸಲ್ಲಿಕೆ

 ಜ. 19 ವಲಯ ವರ್ಗಾವಣೆಗೆ ಎ,ಬಿ,ಸಿ ಖಾಲಿ ಹುದ್ದೆಗಳ ಪ್ರಕಟ

 ಜ.20 ಅಂಗವಿಕಲರ ಮೀಸಲಾತಿ ಕೋರುವ ಶಿಕ್ಷಕರ ವೈದ್ಯಕೀಯ ತಪಾಸಣೆ  ಜ. 25 ವಲಯ ವರ್ಗಾವಣೆಗೆ ಅರ್ಹರಿರುವ ಮುಖ್ಯ ಶಿಕ್ಷಕರ ಪಟ್ಟಿ ಪ್ರಕಟ

 ಜ.30 ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್‌

 ಜ.31 ಅಂತಿಮವಾಗಿ ಸಿ ವಲಯದಲ್ಲಿರುವ ಮುಖ್ಯ ಶಿಕ್ಷಕರ, ಹಿರಿಯ ಮುಖ್ಯ ಶಿಕ್ಷರ ಖಾಲಿ ಹುದ್ದೆ ಪ್ರಕಟ

 ಫೆ.3ಕ್ಕೆ ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ ಹಾಗೂ ಹಿರಿಯ ಮುಖ್ಯ ಶಿಕ್ಷಕರ ಪಟ್ಟಿ ಪ್ರಕಟ

ಒಂದೂವರೆ ವರ್ಷದಿಂದ ಬಡ್ತಿ ಇಲ್ಲದೇ ಸಾಕಷ್ಟು ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿಯಿಂದ ವಂಚಿತರಾಗಿ ನಿವೃತ್ತಿ ಸಹ ಹೊಂದಿದರು. ಇದೀಗ ಸರ್ಕಾರದ ಮೇಲೆ ಒತ್ತಡ ತಂದ ಬಳಿಕ ಒಂದೂವರೆ ವರ್ಷದ ಬಳಿಕ ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಬಡ್ತಿ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. -ಆರ್‌.ಅಶೋಕ್‌ ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next