Advertisement

ಕುಳಾಲು ಸರಕಾರಿ ಕ. ಮಾಧ್ಯಮ ಶಾಲೆಗೆ ಕಾಯಕಲ್ಪ

02:55 AM Jul 06, 2018 | Karthik A |

ವಿಟ್ಲ: ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ ತೀರಾ ಹಳ್ಳಿಯಲ್ಲಿರುವ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಕನ್ನಡ ಮಾಧ್ಯಮ ಶಾಲೆಯೊಂದನ್ನು ಊರಿನ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಸ್ಥಳೀಯ ಸಂಘಟನೆಗಳು ಶಾಲೆಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಉಳಿಸುವುದರ ಜತೆಗೆ ಇದೀಗ ಶಾಲಾ ಮಕ್ಕಳಿಗೆ ವಾಹನದ ಸೌಲಭ್ಯ ನೀಡಿ ಮಾದರಿಯಾಗಿದ್ದಾರೆ.

Advertisement

ಕುಳಾಲು ಸರಕಾರಿ ಶಾಲೆ
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಹಸಿರು ಹೊದಿಕೆಯ ಹಳ್ಳಿ ಪ್ರದೇಶದಲ್ಲಿರುವ ಕುಳಾಲು ಸರಕಾರಿ ಮಾದರಿ ಹಿ. ಪ್ರಾ. ಶಾಲೆ 1930ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಭಂಡಾರಿ ಅವರ ಮುಂದಾಳತ್ವದಲ್ಲಿ ಗುಡಿಸಲಿನಲ್ಲಿ ಪ್ರಾರಂಭಗೊಂಡಿತ್ತು. ಈ ಭಾಗದಲ್ಲಿ ಸಾವಿರಕ್ಕಿಂತಲೂ ಅಧಿಕ ಮನೆಗಳಿವೆ. ಈ ಭಾಗದ ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯನ್ನೇ ಅವಲಂಬಿಸಿದ್ದರು. ಶಾಲಾ ವಜ್ರ ಮಹೋತ್ಸವ ಸವಿನೆನಪಿಗಾಗಿ ಹಾಲ್ತೋಟ ನಾರಾಯಣ ಭಟ್‌ ಅವರು ಕಲಾ ಮಂದಿರವನ್ನು ಸ್ಥಾಪಿಸಿಕೊಟ್ಟಿದ್ದರು. 300ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳ ಸಂಖ್ಯೆ ಪದೇ ಪದೇ ಕುಸಿಯುವ ಜತೆಗೆ ಶಿಕ್ಷಕರ ಸಂಖ್ಯೆಯೂ ಕುಸಿಯಲಾರಂಭಿಸಿತು.

ವಿವಿಧ ಸೌಲಭ್ಯ
ಇದೀಗ ಸರಕಾರದಿಂದ ನಾಲ್ವರು ಶಿಕ್ಷಕರನ್ನು ಹಾಗೂ ಮೂವರು ಗೌರವ ಶಿಕ್ಷಕರನ್ನು ನೇಮಿಸಲಾಗಿದೆ. ಬಳಿಕ ಇಲಾಖೆಯ ಹಾಗೂ ಊರವರ ಸಹಕಾರ ದಲ್ಲಿ ಶಾಲೆಗೆ ಮೂಲ ಸೌಕರ್ಯ  ಒದಗಿಸಲು ಶ್ರಮಿಸಿದರು. ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ, ನ್ಪೋಕನ್‌ ಇಂಗ್ಲಿಷ್‌, ಯುಕೆಜಿ ತರಗತಿ ಪ್ರಾರಂಭಿಸಲಾಯಿತು. ವಾರ್ಷಿಕೋತ್ಸವವನ್ನು ಪುನರಾರಂಭಿಸಲಾಯಿತು. ಇದೀಗ ವಿದ್ಯಾರ್ಥಿಗಳ ಸಂಖ್ಯೆ 91ಕ್ಕೇರಿತು. ವಾರಾಹಿ ಯುವ ವೃಂದದ ನೇತೃತ್ವದಲ್ಲಿ 3.80 ಲಕ್ಷ ರೂ. ವೆಚ್ಚದಲ್ಲಿ ಮಹೇಂದ್ರ ಜೀಟೊ ವಾಹನ ಖರೀದಿಸಿ ಶಾಲೆಗೆ ಹಸ್ತಾಂತರ ಮಾಡಲಾಯಿತು.

ಹುದ್ದೆ ಭರ್ತಿಯಾಗಬೇಕಿದೆ
ಪ್ರಸ್ತುತ ಇಲ್ಲಿ ಮೂವರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಅದನ್ನು ತುಂಬಿಸುವ ಕಾರ್ಯಗಳು ನಡೆಯುತ್ತಿದೆ. ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌, ತಾ.ಪಂ. ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷರೂ ವಾರಾಹಿ ಯುವ ವೃಂದದ ಗೌರವಾಧ್ಯಕ್ಷರೂ ಆದ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಧ್ಯಕ್ಷ ಜನಾರ್ದನ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶರೀಫ್‌ ಕೆ.ಎಚ್‌. ಹಾಗೂ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಲ್ಲಿ ಇದೀಗ ಶಾಲೆ ಚೇತರಿಸಿ, ಮುನ್ನಡೆಯುತ್ತಿದೆ.

ಬೇಡಿಕೆ
ಶಾಲಾ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ. ಶಾಲಾ ಹಿತರಕ್ಷಣ ಸಮಿತಿ ನಿರ್ಮಿಸುವ ಮೂಲಕ ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಹಳೆ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದು, ನೂತನ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

Advertisement

ವಾಹನ ಹಸ್ತಾಂತರ
ಶಾಲೆಗೆ ವಾಹನ ಹಸ್ತಾಂತರ ಸಮಾರಂಭವನ್ನು ಹಿರಿಯ ಶಿಕ್ಷಕ ಕೆ.ಪಿ. ಮೂಲ್ಯ ಚಾಲನೆ ನೀಡಿದರು. ಈ ಸಂದರ್ಭ 
ಶಾಲಾ ಮುಖ್ಯ ಶಿಕ್ಷಕಿ ತಿಮ್ಮು, ಕೊಳ್ನಾಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಧೀರ್‌ ಕುಮಾರ್‌, ಸದಸ್ಯ ಗುರುವಪ್ಪ ಮುಗೇರ, ಪುಷ್ಪಲತಾ, ಶಿಕ್ಷಕ ಪರಮೇಶ್ವರ ಆಚಾರ್ಯ, ವಿಜಯಕುಮಾರ್‌, ಹೇಮ ಎಂ.ಟಿ., ಧರ್ಮೇಂದ್ರ, ಶಮೀರ್‌, ಹರೀಶ್‌ ಗೌಡ, ಅಬ್ದುಲ್‌ ಖಾದರ್‌ ಮೊದಲಾದವರು ಶುಭ ಹಾರೈಸಿದರು.

ಶಾಲೆ ಉಳಿಸಿದರು
2015-16 ಸಾಲಿನಲ್ಲಿ 1ರಿಂದ 8ನೇ ತರಗತಿ ವರೆಗಿನ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 75ಕ್ಕೆ ಇಳಿಯತೊಡಗಿತು. ಈ ಸಂದರ್ಭ ಉದಯ ಕುಮಾರ್‌ ಅವರು ಒಬ್ಬರೇ ಶಿಕ್ಷಕರು ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದರು. ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಶಾಲಾ ವಾರ್ಷಿಕೋತ್ಸವ ಕೂಡ ಸ್ಥಗಿತಗೊಂಡಿತ್ತು. ಬಾಗಿಲು ಮುಚ್ಚುವ ಪರಿಸ್ಥಿತಿಗೆ ತಲುಪಿತ್ತು. ಇದರಿಂದ ಆತಂಕಕ್ಕೀಡಾದ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದರು. ಈ ಬಗ್ಗೆ ಗಮನ ಹರಿಸಿದ ಊರಿನ ಗ್ರಾಮಸ್ಥರು ಹಾಗೂ ವಾರಾಹೀ ಯುವ ಯುವ ವೃಂದ ಸಂಘಟನೆಯವರು ಶಾಲೆಯ ಉಳಿವಿಗಾಗಿ ಶ್ರಮಪಟ್ಟರು.

ನೂತನ ಕಟ್ಟಡ: ಸರಕಾರಕ್ಕೆ ಬೇಡಿಕೆ 
ಹೆತ್ತವರಿಗೆ ಧೈರ್ಯ ತುಂಬಿಸಿ, ಮಕ್ಕಳನ್ನು ಇದೇ ಶಾಲೆಗೆ ಕಳುಹಿಸಲು ವಿನಂತಿಸಲಾಗಿದೆ. ಹಳೆ ವಿದ್ಯಾರ್ಥಿಗಳನ್ನು ಮತ್ತು ಗಣ್ಯರನ್ನು ಸಂಪರ್ಕಿಸಿ, ಹಿತರಕ್ಷಣ ಸಮಿತಿ ರಚಿಸಿ, ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಯುಕೆಜಿ ಆರಂಭಿಸಲಾಗಿದೆ. 10 ವಿದ್ಯಾರ್ಥಿಗಳು ಯುಕೆಜಿಗೆ ಸೇರ್ಪಡೆಗೊಳ್ಳಲಿದ್ದಾರೆ. ಇದೀಗ ಯುಕೆಜಿ ಮಕ್ಕಳನ್ನು ಸೇರಿಸಿದಾಗ ವಿದ್ಯಾರ್ಥಿಗಳ ಸಂಖ್ಯೆ 100ಕ್ಕೇರಿದೆ. ಕಟ್ಟಡ ಹಳೆಯದಾಗಿದ್ದು, ಶಿಥಿಲಗೊಂಡಿದೆ. ನೂತನ ಕಟ್ಟಡಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ.
-ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಧ್ಯಕ್ಷರು-ಕೊಳ್ನಾಡು ಗ್ರಾ.ಪಂ, ಗೌರವಾಧ್ಯಕ್ಷರು – ವಾರಾಹೀ ಯುವ ವೃಂದ ಕುಳಾಲು

Advertisement

Udayavani is now on Telegram. Click here to join our channel and stay updated with the latest news.

Next