ದೇವದುರ್ಗ: ಸಮೀಪದ ಕೆ. ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಕ್ವಾರೇರೊದಡ್ಡಿ, ಆರೇರದೊಡ್ಡಿ ಮತ್ತು ಪುರಸಭೆ ವ್ಯಾಪ್ತಿಯ ಮುರಿಗೆಮ್ಮ ದಿಬ್ಬಿ ತಾಂಡಾ ಶಾಲೆಗಳ ಕಟ್ಟಡಕ್ಕೆ ಹೊರಗಡೆ ರೈಲು, ಬಸ್‌ಗಳಂತೆ ಬಣ್ಣ ಬಳಿದಿದ್ದು, ವಿದ್ಯಾರ್ಥಿಗಳನ್ನು, ಪಾಲಕರನ್ನು ಸೆಳೆಯುತ್ತಿವೆ.
ರೈಲಿನ ಬೋಗಿ: ಸಮೀಪದ ಕೆ.ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಕ್ವಾರೇರದೊಡ್ಡಿ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ದಾನಮ್ಮ ಅವರ ಪರಿಶ್ರಮ, ಎಸ್‌ಡಿಎಂಸಿ ಸಹಕಾರದಿಂದ ಶಾಲೆಗೆ ರೈಲಿನ ಬೋಗಿಗಳಂತೆ ಬಣ್ಣ ಬಳಿಯಲಾಗಿದೆ. ಶಾಲೆ ಗ್ರಾಮಸ್ಥರು ಮತ್ತು ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 40 ಮಕ್ಕಳು ಇದ್ದಾರೆ. ಮಕ್ಕಳು ಶಾಲೆ ಒಳಗೆ, ಹೊರಗೆ ಬಂದರೆ ರೈಲಿನ ಬೋಗಿಯೊಳಗೆ ಬಂದಂತೆ ಮತ್ತು ರೈಲಿನಿಂದ ಇಳಿದಂತೆ ಕಾಣುತ್ತದೆ. ಶಾಲೆಗೆ ಈ ರೀತಿ ಬಣ್ಣ ಬಳಿದಿದ್ದನ್ನು ನೋಡಿ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಕೂಡ ತಮ್ಮ ಶಾಲೆಗೂ ಇದೇ ರೀತಿ ಬಣ್ಣ ಬಳಿಸಿ, ಗಮನ ಸೆಳೆಯುವಂತಾಗಬೇಕು ಎಂದು ಅಭಿಪ್ರಾಯ
ವ್ಯಕ್ತಪಡಿಸುತ್ತಿದ್ದಾರೆ.
ಬಸ್‌ನಂತೆ ಬದಲಾದ ಶಾಲೆ: ಸಮೀಪದ ಆರೇರದೊಡ್ಡಿ ಸರಕಾರಿ ಶಾಲೆ ಇದೀಗ ಕೆಎಸ್ಸಾರಿಸಿ ಬಸ್‌ನಂತೆ ಕಂಗೊಳಿಸುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಿಟಕಿಗೆ ಕುಳಿತು ಪ್ರಯಾಣಿಸುತ್ತಿರುವಂತೆ ಶಾಲಾ ಕೊಠಡಿ ಕಿಟಕಿ ಪಕ್ಕ ಕುಳಿತು ಪಾಠ ಕೇಳುವ ಮಕ್ಕಳು ಬಸ್‌ನಲ್ಲಿ ಪ್ರಯಾಣಿಸುತ್ತಿರುವಂತೆ ಭಾಸವಾಗುತ್ತಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 30ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಶಾಲೆ ಒಳಗೆ ಮಕ್ಕಳ ಜ್ಞಾನ ವೃದ್ದಿಗಾಗಿ ಮಹನೀಯರ ಚಿತ್ರಗಳು, ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಬಿ.ಎಸ್. ಕೇಶಾಪುರ ತಿಳಿಸಿದರು.
ಪ್ರಾಣಿ ಪಕ್ಷಿಗಳ ನೋಟ: ಪಟ್ಟಣದ ಪುರಸಭೆ ವ್ಯಾಪ್ತಿಯ ಮರಿಗೆಮ್ಮ ದಿಬ್ಬಿ ತಾಂಡಾ ಸರಕಾರಿ ಶಾಲೆ ಕೋಣೆಯ ಹೊರಗಡೆಯೂ ರೈಲಿನ ಬೋಗಿಗಳಂತೆ ಬಣ್ಣ ಬಳಿಯಲಾಗಿದೆ. ಕಾಂಪೌಂಡ್ ಒಳಗೆ ಪ್ರಾಣಿ, ಪಕ್ಷಿಗಳು, ವಾಹನಗಳು ಸೇರಿ ಸರಕಾರ ಸರ್ಕಾರಿ ಶಾಲೆಗಳಿಗೆ ಜಾರಿಗೊಳಿಸಿದ ಯೋಜನೆಗಳ ಮಾಹಿತಿಯನ್ನು
ಬರೆಸಲಾಗಿದೆ. ಶಾಲೆಗೆ ರೈಲಿನ ಬೋಗಿಗಳಂತೆ ಬಣ್ಣ ಬಳಿದಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ತುಳಜಾರಾಮ್.
ಕ್ವಾರೇರದೊಡ್ಡಿ, ಮರಿಗೆಮ್ಮ ದಿಬ್ಬಿ, ಆರೇರದೊಡ್ಡಿ ಶಾಲೆ ತರಗತಿ ಕೋಣೆಗಳ ಹೊರಗೆ ರೈಲಿನ ಬೋಗಿ, ಕೆಎಸ್ಸಾರಿrಸಿ ಬಸ್‌ನಂತೆ ಬಣ್ಣ ಬಳಿಸಿ ಸಾರ್ವಜನಿಕರ ಗಮನ ಸೆಳೆಯುವಂತಹ ಕಾರ್ಯವನ್ನು ಮುಖ್ಯ ಶಿಕ್ಷಕರು ಮಾಡಿದ್ದಾರೆ. ಶಾಲೆಗಳಿಗೆ ಭೇಟಿ ವೀಕ್ಷಿಸುವೆ.
ಡಾ| ಎಸ್.ಎಂ.ಹತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ ತೇಲ್ಕರ್