ಧಾರವಾಡ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಕಂಬಾರರ ಭಾಷಣದ ಆಶಯದಂತೆ ಕೊನೆಗೂ ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀ ಕರಣಕ್ಕೆ ಸಮ್ಮೇಳನದ ನಿರ್ಣಯ ಸ್ಪಂದಿಸಿತು. ಇಂಗ್ಲಿಷ್ ಭಾಷೆಯ ಆಕ್ರಮಣಕ್ಕೆ ಕಡಿ ವಾಣ ಹಾಕಲು, ಕನ್ನಡ ಭಾಷೆ ಉಳಿಸಲು ಸಮ್ಮೇಳನ ಪ್ರಯೋಗಿಸಿದ ಪ್ರಬಲ, ಅಂತಿಮ ಅಸ್ತ್ರ ಇದಾಗಿದೆ.
ಇಲ್ಲಿನ ಅಂಬಿಕಾತನಯದತ್ತ ಮಹಾವೇದಿಕೆಯಲ್ಲಿ ರವಿವಾರ ನಡೆದ ಕೊನೆಯ ದಿನದ ಬಹಿರಂಗ ಅಧಿವೇಶನದಲ್ಲಿ ಒಟ್ಟು 5 ನಿರ್ಣಯಗಳನ್ನು ಕೈಗೊಳ್ಳ ಲಾಯಿತು. ಅವು ಹೀಗಿವೆ…
1.ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆ ಹಾಡುವ ಅವಧಿಯನ್ನು ಗರಿಷ್ಠ 2 ನಿಮಿಷ 30 ಸೆಕೆಂಡ್‌ಗಳಿಗೆ ನಿಗದಿಗೆ ಸರಕಾರಕ್ಕೆ ಒತ್ತಾಯ.
2.ಕರ್ನಾಟಕ ಸರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಈ ನಿರ್ಣಯ ವನ್ನು ಅನುಷ್ಠಾನ ಮಾಡಬಾರದು.
3.ಕೇಂದ್ರ ಸರಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಬೇಕು.
4.ಎಲ್‌ಕೆಜಿಯಿಂದ 7ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು.
ಇನ್ನೊಂದು ನಿರ್ಣಯ ಸಮ್ಮೇಳನ ಯಶಸ್ಸಿಗೆ ಧನ್ಯವಾದ ಕೋರುವುದಾಗಿತ್ತು.
ಸರ್ವಾಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ನೇತೃತ್ವದಲ್ಲಿ ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಕನ್ನಡಾಭಿಮಾನಿಗಳು ಸಹಮತ ವ್ಯಕ್ತಪಡಿಸಿದರು.