Advertisement

ಪ್ರಾಥಮಿಕ ಶಿಕ್ಷಣ ವಂಚಿತ “ಮಹಾ’ಮಕ್ಕಳು

11:52 AM Nov 16, 2019 | Team Udayavani |

ಮುಧೋಳ: “ನಾನು ಮೊದಲು ಊರಲ್ಲಿ ಶಾಲೆಗೆ ಹೋಗುತ್ತಿದ್ದೆ. ಆದರೆ ಅಪ್ಪ-ಅಮ್ಮ ಕಬ್ಬು ಕಡಿಯಲು ಈ ಕಡೆಗೆ ಬರಲು ಆರಂಭಿಸಿದ ಮೇಲೆ ನಾನು ಶಾಲೆ ಬಿಟ್ಟೆ. ಅಪ್ಪ-ಅಮ್ಮ ಕಬ್ಬು ಕಡಿಯಲು ಹೋದರೆ ನಾವು ಜೋಪಡಿ ನೋಡ್ಕೊತೀವಿ’ ಎಂದು ಹೇಳುವಾಗ ಆ ಪುಟ್ಟ ಬಾಲಕನ ಮುಖದಲ್ಲಿ ಏನನ್ನೋ ಕಳೆದುಕೊಂಡ ನೋವು ಕಾಣಿಸುತ್ತಿತ್ತು.

Advertisement

ಹೌದು, ನೆರೆಯ ಮಹಾರಾಷ್ಟ್ರದಿಂದ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಹಲವಾರು ಭಾಗದಲ್ಲಿ ಕಬ್ಬು ಕಟಾವು ಮಾಡಲು ಬರುವ ನೂರಾರು ಕುಟುಂಬದಲ್ಲಿನ ಮಕ್ಕಳ ಮನದಲ್ಲಿದ್ದ ನೋವನ್ನು ಉದಯವಾಣಿ ಎದುರು ಅಶೋಕ ಎಂಬ ಬಾಲಕ ಬಿಚ್ಚಿಟ್ಟನು. ಸಿಕ್ಕುಗಟ್ಟಿದ ಕೂದಲು, ಹಳೆಯ ಬಟ್ಟೆ ತೊಟ್ಟಿದ್ದ ಅಶೋಕನನ್ನು ನೋಡಿದರೆ ಎಂತವರಿಗೂ ಅವರ ಬಡತನದ ಪರಿಸ್ಥಿತಿ ಅರ್ಥವಾಗುವಂತಿತ್ತು. ತನ್ನ ಅರೆ ಬರೇ ಕನ್ನಡ ಮಿಶ್ರಿತ ಮರಾಠಿ ಭಾಷೆಯಿಂದ ತನ್ನ ಮನದ ದುಮ್ಮಾನವನ್ನು ಅಶೋಕ ತೆರೆದಿಟ್ಟನು.

ರಾಜ್ಯದಲ್ಲಿ ಕಬ್ಬು ನುರಿಸಲು ಕಾರ್ಖಾನೆ ಆರಂಭವಾಗುವುದರಿಂದ ಕಾರ್ಖಾನೆ ಕಬ್ಬು ನುರಿಯುಸುವ ಕಾರ್ಯವನ್ನು ಸ್ಥಗಿತಗೊಳಿಸುವವರೆಗೆ 5ರಿಂದ 6 ತಿಂಗಳು ನೆರೆಯ ಮಹಾರಾಷ್ಟ್ರದ ಜನ ತಂಡೋಪ ತಂಡವಾಗಿ ಕಬ್ಬು ಕಟಾವು ಮಾಡುವ ಕೆಲಸಕ್ಕೆಂದು ಬರುತ್ತಾರೆ. ಬಡತನ, ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕ ಅಭದ್ರತೆ ನೀಗಿಸಿಕೊಳ್ಳಲು 6 ತಿಂಗಳುವರೆಗೆ ರಾಜ್ಯಕ್ಕೆ ಆಗಮಿಸುವ ಈ ಜನ, ತಮ್ಮೊಡನೆ ಮಕ್ಕಳನ್ನು ಕರೆ ತಂದಿರುತ್ತಾರೆ. ಹೆತ್ತವರ ಜತೆ ರಾಜ್ಯಕ್ಕೆ ಆಗಮಿಸುವ ಮಕ್ಕಳು ಅನಿವಾರ್ಯವಾಗಿ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಕಲಿಯುವ ವಯಸ್ಸಿನಲ್ಲಿ ಹೆತ್ತವರ ಕೆಲಸಕ್ಕೆ ನೆರವಾಗುತ್ತಾರೆ. ಅವರೊಡನೆ ಅಲೆಮಾರಿ ಜೀವನ ನಡೆಸುವುದರಿಂದ ಮಕ್ಕಳ ಸುಂದರ ಬಾಲ್ಯದ ಜೀವನ ಮಸುಕಾಗುತ್ತಿದೆ. ಬಡತನದ ಬೇಗೆಗೆ ಮಕ್ಕಳ ಹಕ್ಕುಗಳು ಮೊಟಕಾಗುತ್ತಿವೆ.

ಹೆತ್ತವರಿಗೆ ನೆರವು: ಹೆತ್ತವರು ಬೆಳಗಿನ ಜಾವದಲ್ಲೇ ಕಬ್ಬು ಕಟಾವು ಮಾಡಲು ತೆರಳುವುದರಿಂದ ಮಕ್ಕಳು ತಮ್ಮ ಗುಡಿಸಲಿನ ಕಾವಲು ಕಾಯುವುದು, ಮನೆ ಕೆಲಸ ಮಾಡುವುದು, ತಮ್ಮ ತಂದೆ- ತಾಯಂದರಿಗೆ ಬುತ್ತಿ ತೆಗೆದುಕೊಂಡು ಹೋಗುವುದು ಮಾಡುತ್ತಾರೆ. ಬಡತನದ ಅನಿವಾರ್ಯತೆಯಿಂದಾಗಿ ಆಟವಾಡಿ ಬೆಳೆಯುವ ವಯಸ್ಸಲ್ಲಿ ಮನೆ ಕೆಲಸ ಮಾಡುತ್ತ ಶಿಕ್ಷಣದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಮಕ್ಕಳಿಗಾಗಿಯೇ ಸರ್ಕಾರ ಟೆಂಟ್‌ ಶಾಲೆ ಆರಂಭಿಸಬೇಕು ಎಂಬುದು ಕೆಲವರ ಒತ್ತಾಯ. ಆದರೆ, ಈ ಮಕ್ಕಳು, ಅವರ ಪಾಲಕರು ಅದಕ್ಕೆ ಸ್ಪಂದಿಸಿದರೆ, ಮಕ್ಕಳು ಹಕ್ಕು ಮೊಟಕಾಗುವುದು ತಪ್ಪಿಸಬಹುದು.

ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಜಿಲ್ಲೆಗೆ ಬಂದಿರುವ ಪಾಲಕರ ಮಕ್ಕಳಿಗೆ ಶಿಕ್ಷಣ ಕೊಡಲು ಇಲಾಖೆಯಲ್ಲಿ ವಿಶೇಷ ಅವಕಾಶವಿಲ್ಲ. ಆದರೆ, ಅವರು ಕನ್ನಡ ಮಾಧ್ಯಮ ಶಿಕ್ಷಣ ಪಡೆಯಲು ಇಚ್ಛಿಸಿದರೆ ಅವರಿಗೆ ವಲಸೆ ಮಕ್ಕಳು ಎಂಬ ಪತ್ರ ನೀಡುತ್ತೇವೆ. ಅವರು ನಮ್ಮ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಇಂಗ್ಲಿಷ್‌, ಗಣಿತ ಸಹಿತ ವಿವಿಧ ವಿಷಯ ಕಲಿಯಬಹುದು. ಅವರಿಗೆ ಬಿಸಿ ಊಟದ ವ್ಯವಸ್ಥೆ ಮಾಡಲೂ ಅವಕಾಶವಿದೆ. ವಲಸೆ ಬಂದಿರುವ ಪಾಲಕರು, ಈ ಪ್ರಯೋಜನೆ ಪಡೆಯಬಹುದು. ಅಂತಹ ಮಕ್ಕಳು, ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಮುಂದೆ ಬಂದರೆ ತಕ್ಷಣ, ವಸಲೆ ಪತ್ರ ನೀಡಿ, ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಲಾಗುವುದು.  –ಶ್ರೀಶೈಲ ಎಸ್‌. ಬಿರಾದಾರ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next