Advertisement
ವಿದ್ಯಾರ್ಥಿಯ ಮುಗ್ಧತನವನ್ನು ಮತ್ತು ಕಲಿಕಾ ದೌರ್ಬಲ್ಯವನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವವರ ವಿರುದ್ಧ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳಲ್ಲಿನ ಕಲಿಕಾ ದೌರ್ಬಲ್ಯವನ್ನು ಈ ರೀತಿಯಾಗಿ ಗೇಲಿ ಮಾಡುವುದು ಮತ್ತು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವದಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು ಮತ್ತು ಇತರರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದರು.
‘ಮಕ್ಕಳು ತಪ್ಪು ಉಚ್ಛಾರ ಮಾಡುವುದು ಕಲಿಕಾ ಪ್ರಕ್ರಿಯೆಯಲ್ಲಿ ಸಹಜವೇ, ನಿರಂತರ ಕಲಿಕೆಯ ನಂತರ ಆ ಮಗುವಿಗೆ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಛಾರ ಸಾಧ್ಯವಾಗುತ್ತದೆ. ಆದರೆ ಈ ರೀತಿಯಾಗಿ ತಪ್ಪು ಪದ ಉಚ್ಛಾರ ಮಾಡುವುದನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಾಗ ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟುಮಾಡಿ ಆ ಮಗು ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗಬಹುದು. ಶಿಕ್ಷಕರು ಮಕ್ಕಳಿಗೆ ಸರಿಯಾದ ಉಚ್ಛಾರ ವಿಧಾನವನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಂತಹ ಕೆಲಸ ನಿಜಕ್ಕೂ ಅಪರಾಧವೇ ಹೌದು.’ ಎಂದು ಸಚಿವರು ತಮ್ಮ ಆದೇಶ ಪ್ರತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಕೃತ್ಯ ಯಾವ ಶಾಲೆಯಲ್ಲಿ ನಡೆದಿದೆ ಹಾಗೂ ಈ ರೀತಿಯಾಗಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವ್ಯಕ್ತಿಗಳ ಮೇಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡುವಂತೆ ಸಚಿವ ಸುರೇಶ್ ಕುಮಾರ್ ಅವರು ಆದೇಶ ನೀಡಿದ್ದಾರೆ. ಮತ್ತು ಮುಂಬರುವ ದಿನಗಳಲ್ಲಿ ಮಕ್ಕಳ ಕಲಿಕಾ ದೌರ್ಬಲ್ಯವನ್ನು ಈ ರೀತಿಯಾಗಿ ಸಾರ್ವಜನಿಕವಾಗಿ ಗೇಲಿ ಮಾಡುವ ಶಿಕ್ಷಕರು ಮತ್ತು ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದೂ ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಈ ಕುರಿತಾಗಿ ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Related Articles
Advertisement