ಬೆಂಗಳೂರು: ಬೆಂಗಳೂರು ರಕ್ಷಿಸಿ ಎಂದು ನಗರಾದ್ಯಂತ ಪಾದಯಾತ್ರೆ ಮಾಡಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಹ ಪ್ರತಿ ಯಾತ್ರೆಗೆ ಮುಂದಾಗಿದೆ.
ಮಾರ್ಚ್ 21 ರಿಂದ 28 ರ ವರೆಗೆ ನಗರದ 28 ಕ್ಷೇತ್ರಗಳಲ್ಲಿಯೂ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಬಿಜೆಪಿ ಅವಧಿಯಲ್ಲಿನ ವೈಫಲ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
ನಗರದಲ್ಲಿ ಕನಿಷ್ಠ 18 ರಿಂದ 20 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್ ಬಿಜೆಪಿ ಅವಧಿಯಲ್ಲಿ ನಡೆದ ಅವ್ಯವಹಾರಗಳು, ಬಿಬಿಎಂಪಿ ಪೈಲ್ ಸುಟ್ಟ ಪ್ರಕರಣ, ನೈಟ್ ಟೆಂಡರ್ ಪ್ರಕರಣ, ಸಾಲ ಮಾಡಿ ಆಸ್ತಿ ಒತ್ತೆ ಇಟ್ಟಿರುವುದು, ಗಾಬೇìಜ್ ಸಿಟಿ ಎಂದು ಹಣೆ ಪಟ್ಟಿ ಕಟ್ಟಿಸಿದ್ದು, 110 ಹಳ್ಳಿಗಳನ್ನು ನಗರಕ್ಕೆ ಸೇರಿಸಿ ಯಾವುದೇ ಮೂಲ ಸೌಕರ್ಯ ನೀಡದೇ ಇರುವುದನ್ನು ಪಟ್ಟಿ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ಸಾಧನೆಗಳ ಪಟ್ಟಿಯನ್ನೂ ಸಿದ್ದಪಡಿಸಿ ಪುಸ್ತಕ ರೂಪದಲ್ಲಿ ಜನತೆಗೆ ವಿತರಿಸಲು ತೀರ್ಮಾನಿಸಿದೆ.
ಇಂದಿರಾ ಕ್ಯಾಂಟೀನ್, ವೈಟ್ ಟ್ಯಾಪಿಂಗ್, ಟೆಂಡರ್ ಶ್ಯೂರ್ ರಸ್ತೆ, ಮೇಲ್ಸೇತುವೆಗಳ ನಿರ್ಮಾಣದಂತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಪಾದಯಾತ್ರೆಯ ಮೂಲಕ ಜನತೆಗೆ ಮಾಹಿತಿ ಒದಗಿಸಿ, ಸಣ್ಣ ಪ್ರಮಾಣದಲ್ಲಿ ಸಭೆಯನ್ನೂ ನಡೆಸಲು ಆಡಳಿತ ಪಕ್ಷ ತೀರ್ಮಾನಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು, ಅಥವಾ ಕಳೆದ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿ, ಕಾರ್ಪೊರೇಟರ್ಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಂಡು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಬಿಜೆಪಿ ಬೆಂಗಳೂರಿನ ವಿಧಾನಸಭಾ ಕ್ಷೇತಗಳ ಮೇಲೇಯೆ ಹೆಚ್ಚು ಕಣ್ಣಿಟ್ಟಿರುವುದರಿಂದ ಅವರಿಗೆ ಪ್ರಬಲವಾಗಿ ಪೈಪೋಟಿ ನೀಡಿ, ಬಿಜೆಪಿ ಬೆಂಗಳೂರಿನ ಅಭಿವೃದ್ದಿಗೆ ನೀಡಿದ್ದಕ್ಕಿಂತ ಹೆಚ್ಚಿನ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಕಾಂಗ್ರೆಸ್ ಅವಧಿಯಲ್ಲಿಯೇ ಬೆಂಗಳೂರಿಗೆ ಡೈನಾಮಿಕ್ ಸಿಟಿ ಎಂಬ ಬಿರುದು ಸಿಕ್ಕಿರುವುದನ್ನೇ ಪ್ರಬಲವಾಗಿ ಪ್ರತಿಪಾದಿಸಿ, ನಗರದಲ್ಲಿಯೇ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೇರಲು ಆಡಳಿತ ಪಕ್ಷ ಪ್ರಯತ್ನ ನಡೆಸಿದೆ.