Advertisement

ಬೆಲೆ ಏರಿದರೂ ಹಬ್ಬಕ್ಕಿಲ್ಲ ಕುಂದು

11:46 AM Aug 03, 2017 | |

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಸಕಾಲಕ್ಕೆ ಮಳೆಯಿಲ್ಲದೆ ಬರ ಪರಿಸ್ಥಿತಿ ಎದುರಾಗಿದ್ದರೂ, ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ. ಇದೇ ತಿಂಗಳಾಂತ್ಯದಲ್ಲಿ ಗಣೇಶನ ಹಬ್ಬ ಕೂಡ ಬರಲಿದ್ದು, ಈಗಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭಗೊಂಡಿರುವುದು ಕಂಡು ಬಂತು. 

Advertisement

ಕೆ.ಆರ್‌. ಮಾರುಕಟ್ಟೆ, ಗಂಗಾನಗರ, ಜಯನಗರ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿಬಜಾರ್‌, ಯಶವಂತಪುರ, ಮಡಿವಾಳ ಮಾರುಕಟ್ಟೆ, ಮಾಗಡಿ ರಸ್ತೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗ್ರಾಹಕರು ಹಬ್ಬದ ಸಾಮಾಗ್ರಿಗಳನ್ನು ಕೊಳ್ಳಲು ಕಿಕ್ಕಿರಿದಿದ್ದರು. ನಗರದ ಬಡಾವಣೆಗಳ ರಸ್ತೆಗಳ ಇಕ್ಕೆಲುಗಳು ಸಂತೆಯಾಗಿ ಮಾರ್ಪಟ್ಟಿದ್ದು, ಹೂವು, ಹಣ್ಣಿನ ವ್ಯಾಪಾರ ಜೋರಾಗಿಯೇ ಇತ್ತು. 

ಬುಧವಾರ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆ ಏರಿದ್ದು, ಗಂಟೆಗೊಮ್ಮೆ ಹೂವಿನ ಬೆಲೆಯಲ್ಲಿ ಏರಿಳಿತ ಇತ್ತು. ಕನಕಾಂಬರ ಕೆಲವೊಮ್ಮೆ 1200 ರೂ.ಇದ್ದರೆ, ಕೆಲವೊಮ್ಮೆ 1700ಕ್ಕೆ ಜಿಗಿಯುತ್ತಿತ್ತು. ದಿನವ ವಹಿವಾಟು ಅಂತ್ಯಕ್ಕೆ ಕನಕಾಂಬರ ಕೆಜಿಗೆ 1500 ರೂ. ಇತ್ತು. ಮಲ್ಲಿಗೆ ಮತ್ತು ಮಲ್ಲೆ ಹೂವು ಕೆಜಿಗೆ 450ರಿಂದ 500 ರೂ.ನಂತೆ ಮಾರಾಟವಾಗುತ್ತಿತ್ತು.

ಲಕ್ಷ್ಮಿ ದೇವಿಗೆ ಪ್ರಿಯವಾದ ತಾವರೆ-ಕೇದಗೆ, ಮಲ್ಲಿಗೆ ಹೂವು, ಮಲ್ಲೆ ಹೂವು, ಸುಗಂಧರಾಜ ಸೇರಿದಂತೆ ನಾನಾ ಸುಗಂಧಿತ ಹೂವುಗಳನ್ನು ಗ್ರಾಹಕರು ಖರೀದಿಸುತ್ತಿದ್ದರು. ಮತ್ತೂಂದೆಡೆ ಕಳಸ ಇಡುವವರು ಲಕ್ಷ್ಮಿಗೆ ಉಡಿಸಲು ಸೀರೆ-ಕುಪ್ಪಸ, ಲಕ್ಷ್ಮಿ ಮುಖವಾಡ, ವೀಳ್ಯದೆಲೆ, ತೆಂಗಿನ ಕಾಯಿ, ಬಾಳೆಹಣ್ಣು ಖರೀದಿಯಲ್ಲಿ ತೊಡಗಿದ್ದರು. ಮತ್ತೂಂದೆಡೆ ಸೀಬೆ, ಸೇಬು, ಸೀತಾಫಲ, ಅನಾನಸ್‌, ದ್ರಾಕ್ಷಿ ಹೀಗೆ ಪೂಜೆಗಿಡಲು ಬೇಕಾದ ಹಣ್ಣುಗಳ ಬೇಡಿಕೆಯೂ ಹೆಚ್ಚಾಗಿತ್ತು. 

ರಿಯಾಯಿತಿ ಮಾರಾಟ
ವರಲಕ್ಷ್ಮಿ ಹಬ್ಬದ ಪ್ರಯುಕ್ತ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಗುರುವಾರದಿಂದ ಎರಡು ದಿನ ಆಯ್ದ ಹಣ್ಣುಗಳ ಮೇಲೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ ಎಂದು  ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ ತಿಳಿಸಿದ್ದಾರೆ.

Advertisement

ಸೇಬು, ಮೂಸಂಬಿ, ಕಿತ್ತಳೆ, ತೆಂಗಿನಕಾಯಿ, ಬೇಲದ ಹಣ್ಣು, ಬೆಂಗಳೂರು ನೀಲಿ ದ್ರಾಕ್ಷಿ, ಅನಾನಸ್‌, ಸೀತಾಫಲ, ಸೀಬೆ ಹಾಗೂ ಬಾಳೆಹಣ್ಣು ಸೇರಿದಂತೆ ಇತ್ಯಾದಿ ಹಣ್ಣುಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಸುಮಾರು 22 ಸಂಚಾರಿ ವಾಹನಗಳ ಮೂಲಕ ಹಣ್ಣುಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಬ್ಬಗಳ ಸಂದರ್ಭದಲ್ಲಿ ಹೂವು-ಹಣ್ಣಿನ ದರದಲ್ಲಿ ಏರಿಕೆ ಸಾಮಾನ್ಯ. ಕಳೆದ ಹಬ್ಬಗಳಿಗೆ ಹೋಲಿಕೆ ಮಾಡಿದರೆ, ಕನಕಾಂಬರ ಬೆಲೆ ಹಿಂದಿಗಿಂತ ಕಡಿಮೆಯೇ ಇದೆ. ಕಳೆದ ಬಾರಿ ಕೆಜಿಗೆ 2000 ರೂ.ಇತ್ತು. ಉಳಿದಂತೆ ಇತರ ಹೂವುಗಳ ಮೇಲೆ ಶೇ.25ರಿಂದ 30ರಷ್ಟು ಮಾತ್ರ ಬೆಲೆ ಏರಿಕೆ ಇದೆ. ಮಳೆ ಕೊರತೆ ಇದಕ್ಕೆ ಕಾರಣ
– ಚಂದ್ರಶೇಖರ, ಹೂವಿನ ವ್ಯಾಪಾರಿ.

ಕೆ.ಆರ್‌. ಮಾರುಕಟ್ಟೆಯಲ್ಲಿ ಹೂವು ದರ (ಕೆ.ಜಿ.ಗಳಲ್ಲಿ)
-ಕನಕಾಂಬರ  1,500 
-ಮಲ್ಲಿಗೆ ಹೂವು 500-600 
-ಮಳ್ಳೆ ಹೂವು  500 
-ಸೇವಂತಿಗೆ ಹೂವು  250-300 
-ಗುಲಾಬಿ  200-250
-ಕಣಿಗಲೆ ಹೂವು 300
-ಸುಗಂಧರಾಜ್‌ 200-250 
-ತಾವರೆ ಹೂವು (ಜೋಡಿಗೆ) 45-60 
-ಚೆಂಡು ಹೂವು 30-40

ಹಾಪ್‌ಕಾಮ್ಸ್‌ ಹಣ್ಣಿನ ದರ (ಕೆ.ಜಿ.ಗಳಲ್ಲಿ)
-ಸೀಡ್‌ಲೆಸ್‌ ದ್ರಾಕ್ಷಿ 160 
-ದಾಳಿಂಬೆ ಭಾಗÌ (ದೊಡ್ಡದು) 126 
-ಏಲಕ್ಕಿ ಬಾಳೆ  95 
-ಬೆಂಗಳೂರು ನೀಲಿ ದ್ರಾಕ್ಷಿ 72 
-ಮೂಸಂಬಿ 68 
-ಸೀತಾಫಲ 64 
-ನೀಲಂ ಮಾವು 60 
-ಅನಾನಸ್‌ 52 

Advertisement

Udayavani is now on Telegram. Click here to join our channel and stay updated with the latest news.

Next