Advertisement

ಬೆಲೆ ಏರಿಕೆ: ರಸ್ತೆಯಲ್ಲಿ ಒಲೆ ಹಚ್ಚಿ ಆಕ್ರೋಶ

04:37 PM Dec 26, 2020 | Adarsha |

ಕಲಬುರಗಿ: ಕೇಂದ್ರ ಬಿಜೆಪಿ ಸರ್ಕಾರ ಕೇಂದ್ರ ಬಿಜೆಪಿ ಸರ್ಕಾರ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದ ಕ್ರಮ ಖಂಡಿಸಿ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರು ಶುಕ್ರವಾರ ರಸ್ತೆಯಲ್ಲಿ ಒಲೆ ಹಚ್ಚಿ ಪ್ರತಿಭಟನೆ ಮಾಡಿದರು.

Advertisement

ನಗರದ ಜಗತ್‌ ವೃತ್ತದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ರಸ್ತೆ ಮಧ್ಯೆ ಕಟ್ಟಿಗೆಯಿಂದ ಒಲೆ ಹಚ್ಚಿ ಚಪಾತಿ ಮತ್ತು ಚಹಾ ತಯಾರಿಸುವ ಮೂಲಕ ಅಡುಗೆ ಅನಿಲ ಹೆಚ್ಚಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿ ಕಾರದಲ್ಲಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ. ನಿತ್ಯವೂ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ ಎಂದು ಪ್ರತಿಭಟನಾನಿರತ ಕಾರ್ಯಕರ್ತೆಯರು ಕಿಡಿಕಾರಿದರು.

ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಚುನಾವಣೆ ಭಾಷಣದಲ್ಲಿ ಅಚ್ಛೆ ದಿನ್‌ ತರುವುದಾಗಿ ದೇಶದ ಜನತೆ ಭರವಸೆ ನೀಡುತ್ತಿದ್ದರು. ಪ್ರಧಾನಿಯಾಗಿ ಆರು ವರ್ಷಗಳು ಕಳೆದರೂ ಮೋದಿ ಅಚ್ಛೆ ದಿನ್‌ ಭರವಸೆ ನೀಡುತ್ತಲೇ ಇದ್ದಾರೆ. ಜನರಿಗೆ ಅಚ್ಛೆ ದಿನ್‌ಗಳು ಬರುತ್ತಲೇ ಇಲ್ಲ. ಬರೀ ಸುಳ್ಳು ಭರವಸೆ ನೀಡುತ್ತಿರುವ ಮೋದಿ ಅಡುಗೆ ಅನಿಲ ದರವನ್ನು ಏಕಾಏಕಿ 100ರೂ.ಗೆ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ನಗರದಲ್ಲಿ ನಕಲಿ ಮಾರ್ಷಲ್‌ನಿಂದ ದಂಡ ಸಂಗ್ರಹ ! ಹಿಡಿದು ಪೊಲೀಸರಿಗೊಪ್ಪಿಸಿದ ಅಸಲಿ ಮಾರ್ಷಲ್ಸ್

Advertisement

ಈ ಮೂಲಕ ದೇಶದ ಮಹಿಳೆಯರಿಗೆ ಕಣ್ಣೀರು ಹಾಕಿಸುತ್ತಿದ್ದಾರೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಅಸಮಾಧಾನ ವ್ಯಕ್ತಪಡಿಸಿದರು. ಮೋದಿ ಅವರು ಜನವಿರೋಧಿ ಆಡಳಿತದಲ್ಲಿ ತೊಡಗಿದ್ದಾರೆ. ಅವರ ಸರ್ಕಾರದ ಜನ ವಿರೋಧಿ  ನೀತಿಗಳ ವಿರುದ್ಧ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೊಡ, ಪಕ್ಷದ ಹಿರಿಯ ನಾಯಕಿಯರಾದ ಚಂದ್ರಿಕಾ ಪರಮೇಶ್ವರ, ಗೀತಾ ಮುದಗಲ್‌, ಮಹೇಶ್ವರಿ ವಾಲಿ, ಸಂಗೀತಾ ಪಾಟೀಲ, ಜಯಶ್ರೀ ಚಿಂತಪಳ್ಳಿ, ಹೈಮದಿ ಬೇಗಂ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next