Advertisement

ಅಡಿಕೆ ಧಾರಣೆ ಏರಿಕೆ: ಬೆಳೆಗಾರರು ಖುಷ್‌

03:45 AM Mar 07, 2017 | Harsha Rao |

ಶಿವಮೊಗ್ಗ: ಅಡಿಕೆ ದರ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಸರಕು ಮಾದರಿಯ ಅಡಿಕೆ ಧಾರಣೆ ಅರ್ಧ ಶತಕದ ಸಮೀಪಕ್ಕೆ ಬಂದು ನಿಂತಿದೆ. ಕಳೆದೆರಡು ದಿನಗಳಲ್ಲಿ ಕೆಂಪಡಿಕೆಯ ಎಲ್ಲ ಮಾದರಿಯ ಸರಾಸರಿ ಧಾರಣೆ ಪ್ರತಿ ಕ್ವಿಂಟಾಲ್‌ಗೆ 4-5 ಸಾವಿರ ರೂ. ಗಳಷ್ಟು ಏರಿಕೆಯಾಗಿದೆ.

Advertisement

ಕಳೆದ ಶುಕ್ರವಾರ ರಾಶಿ ಇಡಿ ಕ್ವಿಂಟಲ್‌ಗೆ 30 ಸಾವಿರ ಮತ್ತು ಬೆಟ್ಟೆ ಪ್ರತಿ ಕ್ವಿಂಟಲ್‌ಗೆ 32 ಸಾವಿರದಿಂದ 37 ಸಾವಿರ ರೂ.ಗಳಿಗೆ ಏರಿತ್ತು. ಆದರೆ ಸೋಮವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಅಡಿಕೆ ಪ್ರತಿ ಕ್ವಿಂಟಲ್‌ಗೆ
ಗರಿಷ್ಠ 49,300 ರೂ. ತಲುಪಿದ್ದು ಮಂಗಳವಾರ ಹೊಸ ದಾಖಲೆ ಬರೆಯುವ ಸಾಧ್ಯತೆಗಳಿವೆ. ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಅಡಿಕೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 50 ಸಾವಿರ ರೂ. ದಾಟುವ ಎಲ್ಲ ಸಾಧ್ಯತೆ
ನಿಚ್ಚಳವಾಗಿದೆ.

ನೋಟು ಅಮಾನ್ಯಿàಕರಣದ ಬಳಿಕ ಧಾರಣೆಯಲ್ಲಿ ಯಾವುದೇ ಹೆಚ್ಚಳ ಕಾಣಿಸದೆ ಒಂದೇ ಹಾದಿಯಲ್ಲಿ ಸಾಗಿದ್ದ ಅಡಿಕೆ
ಧಾರಣೆಯಿಂದ ರೈತರು ಕಂಗಾಲಾಗಿದ್ದರು. ಈ ಬಾರಿ ಬೆಳೆಯಲ್ಲಿ ಭಾರೀ ಕುಸಿತ ಬೇರೆ ದಾಖಲಾಗಿತ್ತು. ಆದರೆ ಕಳೆದೊಂದು ವಾರದಿಂದ ಅಡಿಕೆ ದರ ಏರುತ್ತಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಧಾರಣೆಯಲ್ಲಿ ಈ ರೀತಿಯ ಹೆಚ್ಚಳ ದಾಖಲಾದ ಬಳಿಕವೂ ರೈತರು ಇನ್ನೂ ತಮ್ಮ ಅಡಿಕೆ ಮಾರದೆ ಹಾಗೆ ಇಟ್ಟುಕೊಂಡಿದ್ದಾರೆ. ಇನ್ನಷ್ಟು ಧಾರಣೆಯ ಲಾಭ ಸಿಗಬಹುದೇನೋ ಎಂಬ ನಿರೀಕ್ಷೆ. ಕೆಲವರಿಗೆ ಎರಡು ವರ್ಷಗಳ ಹಿಂದೆ 90 ಸಾವಿರ ರೂ.ಗೆ ಅಡಿಕೆ ಮಾರಿದ ಸಿಹಿ ನೆನಪು ಮತ್ತು ಇನ್ನು ಹಲವರಿಗೆ ತಮಗೆ ಆ ದರ ಸಿಗಲಿಲ್ಲವಲ್ಲ ಎಂಬ
ಹಪಹಪಿಕೆ ಎರಡೂ ಈ ರೈತರನ್ನು ಕಾಡುತ್ತಿದೆ. ಹೀಗಾಗಿ ಈ ಬಾರಿ ಅಡಿಕೆ ಮಾರದೆ ಕಾದು ನೋಡುವ ತಂತ್ರಕ್ಕೆ ಅಡಿಕೆ ಬೆಳೆಗಾರರು ಮೊರೆ ಹೋಗಿದ್ದಾರೆ.

ಎರಡು ವರ್ಷಗಳ ಹಿಂದೆ ಧಾರಣೆ 90 ಸಾವಿರ ರೂ.ಗೆ ದಾಖಲಾಗಿದ್ದಾಗಲೂ ಕೆಲ ಬೆಳೆಗಾರರು ಅಡಿಕೆ ಮಾರಾಟ ಮಾಡದೆ ಲಕ್ಷ ಬರಲಿ ಎಂದು ಕಾದು ಕೊನೆಗೆ ಅದೇ ಅಡಿಕೆಯನ್ನು ಪ್ರತಿ ಕ್ವಿಂಟಲ್‌ ಗೆ 30 ಸಾವಿರ ರೂ.ಗಳಿಗೆ ಮಾರಿದ ಇತಿಹಾಸವೂ ಇದೆ. ಏಕೆಂದರೆ 90 ಸಾವಿರ ರೂ. ಧಾರಣೆ ಹೆಚ್ಚು ಸಮಯ ಉಳಿಯಲಿಲ್ಲ. ಬಳಿಕ ಕೆಳಗೆ ಜಾರಿದ
ಧಾರಣೆ ಬಂದು ನಿಂತಿದ್ದು 30 ಸಾವಿರ ರೂ.ಗಳ ಬುಡಕ್ಕೆ. ಹೀಗಾಗಿ ಈ ಬಾರಿ ಧಾರಣೆ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

Advertisement

ಹರ್ಷದ್‌ ಮೆಹ್ತಾ ತಂತ್ರಗಾರಿಕೆ ಆತಂಕ 
ಅಡಿಕೆ ಧಾರಣೆಯ ಈ ರೀತಿಯ ಏರಿಕೆಗೆ ಕೆಲ ಕಾರಣ ಹೇಳಲಾಗುತ್ತಿದ್ದರೂ, ಅಗಾಗ್ಗೆ ಅಡಿಕೆ ಮಾರುಕಟ್ಟೆಯಲ್ಲಿ ಬಳಕೆ ಮಾಡುವ “ಹರ್ಷದ್‌ ಮೆಹ್ತಾ’ ತಂತ್ರಗಾರಿಕೆ ಈ ಬಾರಿಯೂ ಇದೆಯೇನೋ ಎಂಬ ಆತಂಕ ಕೆಲ ಅಡಿಕೆ ಬೆಳೆಗಾರರಲ್ಲಿದೆ. ಕೆಲ ವರ್ತಕರು ಭಾರೀ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಮಾಡಿಕೊಂಡಿರುತ್ತಾರೆ. ಇದು ಹೆಚ್ಚು ಬೆಲೆಯಲ್ಲಿ ಕೊಂಡ ಅಡಿಕೆ. ಆದರೆ ಬಳಿಕ ಧಾರಣೆ ಕುಸಿತ ಕಂಡಾಗ ಈ ವರ್ತಕರಿಗೆ ಭಾರೀ ನಷ್ಟ ಎದುರಾಗುತ್ತದೆ. ಇದನ್ನು ತಪ್ಪಿಸಲು ಮಾರುಕಟ್ಟೆಯಲ್ಲಿ ಏರಿಕೆ ದಾಖಲಾಗುವಂತೆ ಮಾಡುತ್ತಾರೆ. ತಮ್ಮ ನಷ್ಟ ಸರಿದೂಗಿ ಲಾಭ ಎಂದುಕೊಂಡ ಸಂದರ್ಭದಲ್ಲಿ ತಮ್ಮ ಎಲ್ಲ ದಾಸ್ತಾನು ಅಡಿಕೆ ಮಾರಾಟ ಮಾಡಿ ಖರೀದಿಯಿಂದ ದೂರ ಸರಿದು ಬಿಡುತ್ತಾರೆ. ಆಗ ಅಡಿಕೆ ಧಾರಣೆ ಸರ್ರೆಂದು ಜಾರುತ್ತದೆ.

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next