ಶ್ರೀನಿವಾಸಪುರ: ಹಗಲು ರಾತ್ರಿ ಬಿಡುವಿಲ್ಲದೇ ಶ್ರಮದಿಂದ ದುಡಿದು ರೈತರು ಬೆಳೆಗಳನ್ನು ಮಾರುಕಟ್ಟೆಗೆ ತಂದರೂ, ಕೆಲವು ಸಮಯ ಬೆಲೆಯಿಲ್ಲದೇ ಮತ್ತೆ ಕೆಲವು ಸಂದರ್ಭಗಳಲ್ಲಿ ಅಕಾಲಿಕ ಮಳೆಗೆ ಸಿಲುಕಿ ನಷ್ಟ ಅನುಭವಿಸಿದ್ದಾರೆ.
ಹೀಗಿರುವಾಗ ಕಳೆದ ಒಂದು ತಿಂಗಳಿನಿಂದ ತರಕಾರಿ ಬೆಲೆಯೇರಿಕೆಯಾಗಿ ಬಡವರು ಸಾಮಾನ್ಯ ಜನರಿಗೆ ಕೈಗೆಟುಕದ ಸ್ಥಿತಿ ಮಾರುಕಟ್ಟೆಯಲ್ಲಿದೆ.ವಿವಿಧ ತರಕಾರಿಗಳು 60ರೂ.ಇದ್ದ ಬೆಲೆ 140-200 ವರೆಗೂ ಏರಿಕೆಯಾಗಿದೆ.
ತಾಲೂಕಿನಲ್ಲಿ ತರಕಾರಿ ಬೆಳೆಗಳಲ್ಲಿ ಮುಖ್ಯವಾಗಿ ಟೊಮೆಟೋ, ಹೂಕೋಸು, ಗಡ್ಡೆ ಕೋಸು ಸೇರಿದಂತೆ ಯಲ್ದೂರು ಹೋಬಳಿಯ ಕೆಲವು ಹಳ್ಳಿಗಳಲ್ಲಿ ಬೀಟರೂಟ್, ಕ್ಯಾರೆಟ್ ಬೆಳೆ ಬೆಳೆಯುತ್ತಾರೆ. ತಾಲೂಕಿನಲ್ಲಿ ಬೆಳೆಯುವ ತರಕಾರಿಗಳಲ್ಲಿ ಶೇ.70ರಷ್ಟು ರೈತರು ಟೊಮೆಟೋ ಬೆಳೆ ಬೆಳೆಯಿತ್ತಿದ್ದು, ಶೇ.30ರಷ್ಟು ವಿವಿಧ ತರಕಾರಿ ಬೆಳೆಯುತ್ತಾರೆ. ವಿವಿಧ ತರಕಾರಿ ಬೆಳೆಗಳನ್ನು ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯುದರಿಂದ ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಾರೆ.
ಬೇರೆ ಕಡೆಯಿಂದ ತಂದು ತರಕಾರಿ ಮಾರಾಟ ಮಾಡುವುದರಿಂದ ದರಗಳ ಏರಿಕೆಯಾಗಿದ್ದು, ಬೀನ್ಸ್ ಕೆಜಿ ಗೆ 140 ರೂ, ನುಗ್ಗೆಕಾಯಿ 120 ರೂ, ಬದನೆಕಾಯಿ 80, ನೌಕಲ್ 80 ರೂ, ಕ್ಯಾರೆಟ್ 60 ರೂ, ಬೀಟ್ ರೂಟ್ 60 ರೂಗೆ ಮಾರಾಟ ಮಾಡುತ್ತಿದ್ದು, ಅಧಿಕ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದ್ದರಿಂದ ರೈತರು ತರಕಾರಿ ಖರೀದಿ ಮಾಡುವುದು ಹೇಗೆಂದು ಪ್ರಶ್ನೆ ಮಾಡುತ್ತಾರೆ. ಕಳೆದ ಮಾರ್ಚನಲ್ಲಿ ಸುರಿದ ಅಕಾಲಿಕ ಮಳೆಯಿಂದ ತರಕಾರಿ ಬೆಳೆಗಳು ಹಾಳಾಗಿದ್ದರಿಂದ ದರದಲ್ಲಿ ಏರಿಕೆಯಾಗಿದೆ.
ರೈತರಾದ ನಾವು ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದೇವೆ ಟೊಮೆಟೋ ಸೇರಿದಂತೆ ತರಕಾರಿ ಬೆಳೆ ತೆಗೆದರೂ ಮಾರು ಕಟ್ಟೆಯಲ್ಲಿ ಬೆಲೆ ಸಿಗಲ್ಲ. ಕಳೆದ ತಿಂಗಳಲ್ಲಿ 1.10 ಲಕ್ಷ ರೂ ಬಂಡವಾಳ ಹಾಕಿ ಟೊಮೆಟೋ ಬೆಳೆದಿದ್ದೆ. ಅದರಲ್ಲಿ 6 ಸಾವಿರ ಮಾತ್ರ ಸಿಕ್ಕಿದೆ. 1.30 ಲಕ್ಷ ರೂ ವೆಚ್ಚ ಮಾಡಿ 2 ಎಕರೆಯಲ್ಲಿ ಎಲೆ ಕೋಸು ಹಾಕಿದ್ದರೆ 20 ಸಾವಿ ರೂ ಸಿಕ್ಕಿದೆ. ನಷ್ಟದ ಮೇಲೆ ನಷ್ಟವಾದರೆ ಕುಟುಂಬ ನಿರ್ವಹಣೆ ಮಾಡುವುದು ಹೇಗೆ. ಬಿಸಿಲಿನ ತಾಪ, ರೋಗ ಹಬ್ಬಿ ನಷ್ಟ ಆನುಭವಿಸಬೇಕಾಗಿದೆ.
●ವೆಂಕಟರೆಡ್ಡಿ , ಕೇತಗಾನಹಳ್ಳಿ ರೈತ
ತಾಲೂಕಿನಲ್ಲಿ ತರಕಾರಿಗಳು ಸಿಗುವುದು ಕಡಿಮೆ ಜನರ ಬಯಸಿದ ತರಕಾರಿಗಳನ್ನು ತರಬೇಕು. ಹಾಗಾಗಿ ಕೋಲಾರ ಮತ್ತು ಚಿಂತಾಮಣಿಯಿಂದ ತರಬೇಕು. ಅಂಗಡಿ ಬಾಡಿಗೆ ಸೇರಿದಂತೆ ಉಳಿದ ಖರ್ಚು ನೋಡಿಕೊಳ್ಳಬೇಕು.
●ಸರಸಮ್ಮ, ತರಕಾರಿ ವ್ಯಾಪಾರಸ್ಥೆ
ಯಾವುದೇ ತರಕಾರಿ ಅಂಗಡಿಗಳಿಗೆ ಹೋದರು ಕೊಳ್ಳುವಾಗ ಚೌಕಾಸಿ ಮಾಡುವಂತಿಲ್ಲ ಎಲ್ಲಾ ತರಕಾರಿಗಳು ಕೆಜಿ ಗೆ 60 ರೂನಿಂದ ಮೇಲ್ಪಟ್ಟಿದೆ.ಅನಿವಾರ್ಯ ವಾಗಿ ದರ ಏರಿಕೆಯಾದರೂ ಸ್ವಲ್ಪ ಪ್ರಮಾಣ ದಲ್ಲಾದರೂ ಖರೀದಿ ಮಾಡಿಕೊಂಡು ತಿನ್ನಬೇಕು.
●ವಿಜಯಮ್ಮ, ಗೃಹಣಿ
-ಕೆ.ವಿ.ನಾಗರಾಜ್