Advertisement

ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಬೀಳಲಿ

10:15 PM Sep 02, 2021 | Team Udayavani |

ದೇಶದಲ್ಲಿ ಹಬ್ಬಗಳ ಸರಣಿ ಆರಂಭಗೊಂಡಿದೆ. ಈಗಷ್ಟೇ ಕೃಷ್ಣಾಷ್ಟಮಿಯ ಸಂಭ್ರಮ ಮುಗಿದಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶೋತ್ಸವದ ಸಡಗರ ಆರಂಭಗೊಳ್ಳುತ್ತದೆ. ಕಳೆದ ವರ್ಷ ಕೊರೊನಾದಿಂದಾಗಿ ಹಬ್ಬಗಳ ಸಂಭ್ರಮಕ್ಕೆ ಒಂದಿಷ್ಟು ಕಡಿವಾಣ ಬಿದ್ದಿದ್ದರೆ ಈ ವರ್ಷ ಕೊರೊನಾದ ಹೊರತಾಗಿಯೂ ಜನರು ಹಬ್ಬಗಳನ್ನು ಆಚರಿಸಲು ಸನ್ನದ್ಧರಾಗಿದ್ದಾರೆ. ಆದರೆ ಜನರ ಈ ಎಲ್ಲ ಉತ್ಸಾಹ, ಸಂಭ್ರಮಕ್ಕೆ ಬೆಲೆ ಏರಿಕೆ ತಣ್ಣೀರೆರಚಿದೆ.

Advertisement

ಕಳೆದ ಮೂರ್‍ನಾಲ್ಕು ತಿಂಗಳುಗಳಿಂದೀಚೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಸಾಗಿದೆ. ದೇಶದ ಬಹುತೇಕ ಎಲ್ಲೆಡೆ ಪೆಟ್ರೋಲ್‌ ಲೀ.ಗೆ 100 ರೂ.ಗಳ ಗಡಿಯನ್ನು ದಾಟಿದ್ದರೆ, ಡೀಸೆಲ್‌ ಕೂಡ 100ರ ಸನಿಹದಲ್ಲಿಯೇ ತೊಯ್ದಾಡುತ್ತಿದೆ. ಕಳೆದೆರಡು ವಾರಗಳಿಂದೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯ ಹಾದಿ ಹಿಡಿದಿರುವುದರಿಂದ ದೇಶದಲ್ಲಿಯೂ ತೈಲೋತ್ಪನ್ನಗಳ ಬೆಲೆ ಕೊಂಚ ಕಡಿಮೆಯಾಗಿದೆ. ಆದರೆ ಇದರ ಪ್ರಮಾಣ ನಿರೀಕ್ಷೆಯಷ್ಟಿಲ್ಲ. ಅಂದರೆ ಅಂತಾರಾಷ್ಟ್ರೀಯವಾಗಿ ಬೆಲೆ ಇಳಿಕೆಯಾದ ಪ್ರಮಾಣದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ  ಇಳಿಕೆಯಾಗುತ್ತಿಲ್ಲ.

ಜುಲೈ ತಿಂಗಳಿನಿಂದೀಚೆಗೆ ಅಡುಗೆ ಅನಿಲದ ಬೆಲೆಯಲ್ಲಿಯೂ ಭಾರೀ ಹೆಚ್ಚಳವಾಗಿದೆ. ಜುಲೈ ಆರಂಭದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು 25 ರೂ. ಹೆಚ್ಚಿಸಿದ್ದವು. ಇದಾದ ಬಳಿಕ ಆಗಸ್ಟ್‌ ಒಂದರಂದು ಬೆಲೆ ಪರಿಷ್ಕೃತಗೊಳ್ಳಬೇಕಿತ್ತಾದರೂ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಇದನ್ನು ತಾತ್ಕಾಲಿಕವಾಗಿ ಮುಂದೂಡ ಲಾಗಿತ್ತು. ಅಧಿವೇಶನ ಅಂತ್ಯಗೊಳ್ಳುತ್ತಿದ್ದಂತೆಯೇ ಆಗಸ್ಟ್‌ 18ರಂದು ಮತ್ತೆ ಸಿಲಿಂಡರ್‌ಗೆ 25 ರೂ. ಹೆಚ್ಚಿಸಲಾಯಿತು.

ಇದೀಗ ಸೆ. 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿದೆ. ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 75 ರೂ. ಹೆಚ್ಚಳವಾಗಿದೆ. ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆ ಇಳಿಕೆಯಾದ ಸಂದರ್ಭ ದಲ್ಲಿ ಅಂದರೆ 2020ರ ಮೇಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ನೀಡಲಾ ಗುತ್ತಿದ್ದ ಸಬ್ಸಿಡಿಯನ್ನೂ ಕೇಂದ್ರ ಸರಕಾರ ಸ್ಥಗಿತಗೊಳಿಸಿತ್ತು. ಆದರೆ ಬೆಲೆ ಹೆಚ್ಚಳವಾದ ಬಳಿಕ ಸರಕಾರ ಸಬ್ಸಿಡಿಯನ್ನು ಪುನರಾರಂಭಿಸಿಲ್ಲ. ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಮುಖ್ಯವಾಗಿ ಜನಸಾಮಾನ್ಯರು ಮತ್ತು ಬಡವರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿನ ಭಾರೀ ಏರಿಕೆಯಿಂದಾಗಿ ಎಲ್ಲ ವಸ್ತುಗಳ ಸಾಗಣೆಯ ವೆಚ್ಚದಲ್ಲೂ ಹೆಚ್ಚಳವಾಗಿದೆ. ಸಹಜವಾಗಿಯೇ ಮಾರುಕಟ್ಟೆಯಲ್ಲಿ ದಿನಸಿ, ಖಾದ್ಯ ತೈಲ, ತರಕಾರಿ ಸಹಿತ ಪ್ರತಿಯೊಂದೂ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದೀಗ ಹಬ್ಬಗಳ ಸಮಯವಾ ದ್ದರಿಂದ ಈ ಎಲ್ಲ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು ವ್ಯಾಪಾರಿಗಳೂ ಪೂರೈಕೆಯ ಕೊರತೆ, ಸಾಗಾಟ ವೆಚ್ಚದಲ್ಲಿನ ಹೆಚ್ಚಳದ ನೆಪವೊಡ್ಡಿ ಬೆಲೆ ಏರಿಕೆಗೆ ತಮ್ಮ ದೇಣಿಗೆಯನ್ನೂ ನೀಡುತ್ತಿದ್ದಾರೆ. ಇವೆಲ್ಲದರ ಹೊರೆಯನ್ನು ಗ್ರಾಹಕ ಭರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Advertisement

ಬೆಲೆ ಏರಿಕೆ ಇದೇ ಗತಿಯಲ್ಲಿ ಸಾಗಿದರೆ ಹಣದುಬ್ಬರ ಮತ್ತಷ್ಟು ಹೆಚ್ಚಲಿದ್ದು ಈಗಷ್ಟೇ ಚೇತರಿಕೆ ಹಾದಿ ಹಿಡಿದಿರುವ ದೇಶದ ಜಿಡಿಪಿ ಮತ್ತು ಆರ್ಥಿ ಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಕೇಂದ್ರ ಸರಕಾರ ತೈಲೋತ್ಪನ್ನಗಳ ಬೆಲೆಗೆ  ಕಡಿವಾಣ ಹಾಕುವ ಪ್ರಯತ್ನ ನಡೆಸಿದಲ್ಲಿ ಜನ ಸಾಮಾನ್ಯರ ಮೇಲಣ ಈ ಹೆಚ್ಚುವರಿ ಹೊರೆ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ತೈಲ ಕಂಪೆನಿಗಳು ಮತ್ತು ರಾಜ್ಯ ಸರಕಾರ ಕೂಡ ಕೈಜೋಡಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next