ಹೊಸ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದ್ದಂತೆಯೇ ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟತೊಡಗಿದೆ. ದೇಶದಲ್ಲಿ ಕಳೆದ 16 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ಗೆ ತಲಾ 10 ರೂ. ಹೆಚ್ಚಳವಾಗಿದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ದೇಶಾದ್ಯಂತ ಕೆಲವೊಂದು ಪ್ರಮುಖ ಔಷಧಗಳು, ಅಡುಗೆ ಅನಿಲ, ಸಿಎನ್‌ಜಿ, ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ಇದರ ಪರಿಣಾಮ ಜನಸಾಮಾನ್ಯರ ದೈನಂದಿನ ಜೀವನ ದುಸ್ತರವಾಗಿದೆ.
ಪ್ರಸಕ್ತ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಪರಿಸ್ಥಿತಿ ಆಶಾದಾಯಕವಾಗಿಲ್ಲದಿರುವ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಬೆಲೆ ಏರಿಕೆಯ ಸನ್ನಿವೇಶ ಸೃಷ್ಟಿಯಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಒಂದೆಡೆ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ, ಈ ಯುದ್ಧದ ಪರಿಣಾಮ ರಷ್ಯಾದ ವಿರುದ್ಧ ಅಮೆರಿಕ ಮತ್ತು ಐರೋಪ್ಯ ದೇಶಗಳು ಹೇರಿರುವ ಆರ್ಥಿಕ ದಿಗ್ಬಂಧನಗಳು, ದವಸ ಧಾನ್ಯ ಮತ್ತು ಖಾದ್ಯ ತೈಲಗಳಿಗಾಗಿ ರಷ್ಯಾ ಮತ್ತು ಉಕ್ರೇನ್ ಅನ್ನೇ ಅವಲಂಬಿಸಿದ ದೇಶಗಳಲ್ಲೀಗ ಆಹಾರ ಅಭಾವ ಕಾಣಿಸಿಕೊಂಡಿರುವುದು, ಜಾಗತಿಕವಾಗಿ ಎದುರಾಗಿರುವ ಆರ್ಥಿಕ ಸಂಕಷ್ಟ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿಯೇ ಸಾಗಿರುವ ಕಚ್ಚಾ ತೈಲದ ಬೆಲೆ… ಈ ಎಲ್ಲ ಬೆಳವಣಿಗೆಗಳು ವಿಶ್ವದ ಪ್ರತಿಯೊಂದೂ ರಾಷ್ಟ್ರದ ಮೇಲೆ ಪರಿಣಾಮಗಳನ್ನು ಬೀರಿವೆ.
ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ಜನಸಾಮಾನ್ಯರ ಬದುಕು ಇತ್ತೀಚೆಗೆ ತುಸು ಚೇತರಿಕೆ ಕಾಣತೊಡಗಿತ್ತು. ತೈಲ ಬೆಲೆ ಏರಿಕೆಯ ಬಿಸಿ ಕಳೆದ ವರ್ಷವೇ ದೇಶವನ್ನು ತಟ್ಟಬೇಕಿತ್ತಾದರೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಲ್ಪಟ್ಟಿತು. ಫಲಿತಾಂಶ ಘೋಷಣೆಯಾದ ಎರಡು ವಾರಗಳ ಬಳಿಕ ತೈಲ ಬೆಲೆಯಾದಿಯಾಗಿ ಒಂದೊಂದೇ ವಸ್ತುಗಳ ಬೆಲೆ ಹೆಚ್ಚತೊಡಗಿದೆ. ಇದರಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳತೊಡಗಿದೆ. ರಾಜ್ಯದಲ್ಲಿ ಮೂರು ದಿನಗಳ ಹಿಂದೆಯಷ್ಟೇ ವಿದ್ಯುತ್ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿ ಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಲಾಗಿದ್ದರೆ, ಇದೀಗ ಹಾಲಿನ ಬೆಲೆ ಹೆಚ್ಚಳದ ಸುಳಿವನ್ನು ನೀಡಿದೆ. ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವವೂ ಸರಕಾರದ ಮುಂದಿದ್ದು ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಇವೆರಡೂ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಒಪ್ಪಿದ್ದಲ್ಲಿ ಜನಸಾಮಾನ್ಯರ ಸಂಕಷ್ಟ ಬಿಗಡಾಯಿಸಲಿದೆ.
ಬೆಲೆ ಏರಿಕೆ ವಿಚಾರದಲ್ಲಿ ಸದ್ಯ ಕೇಂದ್ರ ಸರಕಾರದ ಸ್ಥಿತಿ ಹಗ್ಗದ ಮೇಲಣ ನಡಿಗೆಯಂತಾಗಿದೆ. ಆದರೆ ತೈಲ ಕಂಪೆನಿಗಳು, ತನ್ನ ಅಧೀನದ ಸಂಸ್ಥೆಗಳು ಮತ್ತು ಖಜಾನೆಯತ್ತಲೇ ಸರಕಾರ ತನ್ನ ಗಮನವನ್ನು ಕೇಂದ್ರೀಕರಿಸದೆ ಜನಸಾಮಾನ್ಯರತ್ತಲೂ ದೃಷ್ಟಿ ಹರಿಸುವುದು ಅನಿವಾರ್ಯವಾಗಿದೆ. ಬೆಲೆ ಏರಿಕೆಯ ನೇರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಿದರೆ ಇದರ ಪಶ್ಚಾತ್ ಪರಿಣಾಮಗಳು ಜನರ ಖರೀದಿ ಸಾಮರ್ಥ್ಯ, ವ್ಯಾಪಾರ- ವಹಿವಾಟು, ಹಣದುಬ್ಬರ, ಆರ್ಥಿಕತೆಯ ಮೇಲಾಗಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಜನಸಾಮಾನ್ಯರ ಹಿತ ಮತ್ತು ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೆಲವೊಂದು ಬೃಹತ್ ಯೋಜನೆಗಳನ್ನು ತಾತ್ಕಾಲಿಕವಾಗಿ ಮುಂದೂಡಿ ಜನಸಾಮಾನ್ಯರ ಮೇಲಣ ಹೊರೆ ಕಡಿಮೆಗೊಳಿಸಬೇಕು. ಸದ್ಯಕ್ಕಂತೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಟ್ಟಿಗೆ ಇದುವೇ ಮೊದಲ ಆದ್ಯತೆಯಾಗಬೇಕು.