Advertisement

ಪಶು ಆಹಾರ ದರ 50 ರೂ. ಇಳಿಕೆ

12:51 PM Feb 27, 2021 | Team Udayavani |

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿಯಲ್ಲಿ ಸಮೂಹ ಹಾಲು ಶೀತಲಿಕರಣ ಕೇಂದ್ರವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.

Advertisement

ಗ್ರಾಮದಲ್ಲಿ ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಹಾಲು ಉತ್ಪಾದಕರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್‌ ಮೂರ್ತಿ, ಕೋವಿಡ್ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಹಾಲು ಉತ್ಪಾದನೆಗೆ ಹಿನ್ನಡೆಯಾಗಿದೆ. ಹೀಗಾಗಿ ರೈತರನ್ನು ಪ್ರೋತ್ಸಾಹಿಸಲು ಪಶು ಆಹಾರ ದರವನ್ನು 50 ರೂ. ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಗ್ರಾಮದಲ್ಲಿ ಕಳೆದ 38 ವರ್ಷಗಳಿಂದ ಡೇರಿ ಉತ್ತ ಮವಾಗಿ ನಡೆಯುತ್ತಿದ್ದು, ಸಂಘದ ಅಧ್ಯಕ್ಷರನ್ನು ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಆರ್‌.ನರೇಂದ್ರ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಹಾಲಿನ ಉತ್ಪಾದನೆಯಲ್ಲಿ ಕಡಿಮೆಯಾಗಿತ್ತು. ಈಗ 35 ಸಾವಿರ ಲೀಟರ್‌ ಹಾಲು ಪೂರೈಕೆಯಾಗುತ್ತಿದ್ದು, ರೈತರು ಹೈನು ಗಾರಿಕೆಯಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್‌, ಬಸವರಾಜು, ಮಧುವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರಸ್ವಾಮಿ,ಚಾಮುಲ್‌ ನಿರ್ದೇಶಕ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್‌, ತೋಟೇಶ್‌ ಮತ್ತಿತರರು ಹಾಜರಿದ್ದರು.

Advertisement

 

ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ :

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ದಿವ್ಯ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತ್ತು.

ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ. ಗಿರೀಶ್‌ ದಿಲೀಪ ಬೂದೂಲೆ ಆದೇಶದ ಮೇರೆಗೆ ತಹಶೀಲ್ದಾರ್‌ ಕೆ.ಕುನಾಲ್‌ ಅವರು ದೇವಾಲಯದ ಕೊಠಡಿಯಲ್ಲಿದ್ದ ದೇವರ ಚಿನ್ನಾಭರಣಗಳನ್ನು ನೀಡಿದ ಬಳಿಕ ದೇವರಿಗೆ ಭವ್ಯವಾದ ಅಲಂಕಾರ ಮಾಡಲಾಯಿತು.

ಬಳಿಕ ಅಲಂಕೃತ ತೇರಿನಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಬೀದಿಯಲ್ಲಿ 10 ಮೀಟರ್‌ ಉದ್ದ ಎಳೆಯುವ ಮೂಲಕ ಸಂಪ್ರಾದಾಯಿಕ ರಥೋತ್ಸವ ಜರುಗಿತು.

ಫೆ.19ರಂದು ರಥಸಪ್ತಮಿ ಉತ್ಸವದೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಶಾಸಕ ಎನ್‌.ಮಹೇಶ್‌ ಅವರು ಆಗಮಿಸಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಮಸ್ತ ಕೋಮಿನ ಜನತೆಗೆ ನಾರಾಯಣ ಸ್ವಾಮಿ ಹಬ್ಬದ ಶುಭಾಶಯ ಕೋರಿದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನಾರಾಯಣಸ್ವಾಮಿ ಭಕ್ತರು ದೇವರಿಗೆ ಪೂಜೆ, ತಮ್ಮ ಹರಕೆ ಸಲ್ಲಿಸಿ, ಬಳಿಕ ರಥೋತ್ಸವಕ್ಕೆ ಹಣ್ಣು-ಜವನ ಎಸೆದು ಧನ್ಯತಾಭಾವ ಮೆರೆದರು.

ಸಾಂಬ್ರಾಣಿ: ನಾರಾಯಣಸ್ವಾಮಿ ಭಕ್ತರು ಶ್ರೀ ನಾರಾಯಣ ಗೋವಿಂದ, ಗೋವಿಂದ ಎನ್ನುತ್ತಾ ರಥೋತ್ಸವದಲ್ಲಿ ಜೈಕಾರ ಮೊಳಗಿಸಿ ಶಂಕ ಊದಿ ನಂತರದೇವರಿಗೆ ಸಾಂಬ್ರಾಣಿ ಹಾಕುವ ಮೂಲಕ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ರಥೋತ್ಸವ ಪ್ರಯುಕ್ತ ದೇವಸ್ಥಾನ ದಲ್ಲಿ ಭಕ್ತರಿಗೆ ಪ್ರಸಾದ ವಿತರಣೆಯ ಜೊತೆಗೆ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next