ಚಳ್ಳಕೆರೆ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾದ ರೈತರೊಬ್ಬರುಈರುಳ್ಳಿಯನ್ನು ರಸ್ತೆಗೆ ಸುರಿದ ಘಟನೆ ತಾಲೂಕಿನ ಕ್ಯಾತಗೊಂಡನಹಳ್ಳಿಯ ಯಲಗಟ್ಟೆ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ.
ಗ್ರಾಮದ ರೈತ ಶ್ರೀನಿವಾಸ್, ಆರು ಎಕರೆ ಪ್ರದೇಶದಲ್ಲಿಈರುಳ್ಳಿಯನ್ನು ಬೆಳೆದಿದ್ದರು. ಇದಕ್ಕಾಗಿ 3.20 ಲಕ್ಷ ರೂ.ವೆಚ್ಚ ಮಾಡಿದ್ದರು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿಮಾರಲು ಹೋದಾಗ ಕ್ವಿಂಟಲ್‌ಗೆ ಕೇವಲ 230 ರೂ. ದರಇತ್ತು. ಈರುಳ್ಳಿ ಮಾರಾಟ ಮಾಡಿದಾಗ ಕೇವಲ 34 ಸಾವಿರರೂ. ಮಾತ್ರ ದೊರೆಯಿತು.
ಬೆಂಗಳೂರಿಗೆ ಈರುಳ್ಳಿಯನ್ನು ಲಾರಿ ಮೂಲಕ ತೆಗೆದುಕೊಂಡು ಹೋಗಿದ್ದ ಬಾಡಿಗೆಯೇ 40ಸಾವಿರ ರೂ. ಆಗಿದೆ. ಬೆಲೆ ಕುಸಿತದಿಂದ ಬೇಸತ್ತು ಗ್ರಾಮದ ಪ್ರಮುಖ ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ತಂದು ರಸ್ತೆಗೆ ಸುರಿದರು. ಕಳೆದ ಎರಡು ವರ್ಷಗಳಿಂದ ನನ್ನ ಜಮೀನಿನಲ್ಲಿಯಾವುದೇ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುಲ್ಲ. ಜೂನ್‌ತಿಂಗಳಲ್ಲಿ ಬಂದ ಉತ್ತಮ ಮಳೆಯಿಂದ ಉತ್ತೇಜಿತನಾಗಿಲಕ್ಷಾಂತರ ರೂ. ಸಾಲ ಮಾಡಿ ಈರುಳ್ಳಿ ಬೆಳೆದೆ. ಆದರೆಮಾರುಕಟ್ಟೆಯ ಅವ್ಯವಸ್ಥೆಯಿಂದ ಹೆಚ್ಚಿನ ಬೆಲೆ ದೊರೆಯದೆನಷ್ಟ ಅನುಭವಿಸುತ್ತಿದ್ದೇನೆ. ಸರ್ಕಾರ ರೈತರಿಗೆ ನೆರವಾಗಬೇಕು.ಕಡೇ ಪಕ್ಷ ಬೆಳೆ ಬೆಳೆಯಲು ಮಾಡಿದ ಸಾಲವನ್ನಾದರೂ ಮನ್ನಾಮಾಡಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಕಲ್ಯಾಣವನ್ನುಮಾಡುತ್ತೇವೆಂದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತವೆ.ಆದರೆ ಗ್ರಾಮೀಣ ಭಾಗಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ ರೈತನಿಗೆ ಕೂಲಿ ಹಣವೂ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಸಂಘದ ಉಪಾಧ್ಯಕ್ಷರೆಡ್ಡಿಹಳ್ಳಿ ವೀರಣ ಒತ್ತಾಯಿಸಿದ್ದಾರೆ.