ಕೋಲ್ಕತಾ: 2023ರ ಅಕ್ಟೋಬರ್-ಡಿಸೆಂಬರ್ ತ್ತೈಮಾಸಿಕದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ಗ್ರಾಹಕ ವಸ್ತುಗಳ(ಎಫ್ಎಂಸಿಜಿ) ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ. ವಸ್ತುಗಳ ಬೆಲೆಗಳಲ್ಲಿ ಇಳಿಕೆಯಾಗಿದ್ದರಿಂದ ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಆಗಿದೆ. ಕಂಪೆನಿಗಳಾದ ಅದಾನಿ ವಿಲ್ಮರ್, ಮರಿಕೊ, ಡಾಬರ್ ಮತ್ತು ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ ತಮ್ಮ ಹೂಡಿಕೆ ವರದಿಯಲ್ಲಿ ಇದನ್ನು ಉಲ್ಲೇಖಿಸಿದೆ.
ಮುಂದಿನ ಎರಡು ತ್ತೈಮಾಸಿಕಗಳಿಗೂ ಇದೇ ರೀತಿಯ ಉತ್ಸಾಹದ ವಾತಾವರಣ ನಿರೀಕ್ಷಿಸಲಾಗಿದೆ. ಗ್ರಾಮೀಣ ಭಾಗ ದಲ್ಲಿ ಉತ್ಸವ, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳು ಹೆಚ್ಚಾಗಿದ್ದರಿಂದ ಬೇಡಿಕೆ ಕುದುರಿದೆ ಎಂದು ವಿಶ್ಲೇಷಿಸಲಾಗಿದೆ. 2002ರ ಅಕ್ಟೋಬರ್ ತ್ತೈಮಾಸಿಕಕ್ಕೆ ಹೋಲಿಸಿದರೆ ಎಫ್ಎಂಸಿಜಿ ಮಾರಾಟವು ಶೇ.6ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷ ಕಚ್ಚಾ ಉತ್ಪನ್ನಗಳ ಬೆಲೆ ತಗ್ಗಿದ ಪರಿಣಾಮವಾಗಿ ಇದನ್ನು ಗ್ರಾಹಕರಿಗೆ ವರ್ಗಾಯಿಸುವ ಆಲೋಚನೆಯಿಂದ ಆಹಾರ ತೈಲ ಹಾಗೂ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡಲಾಯಿತು. ಹೀಗಾಗಿ ಅಕ್ಟೋಬರ್ ತ್ತೈಮಾಸಿಕದಲ್ಲಿ ಆಹಾರ ತೈಲ ಹಾಗೂ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮಾರಾಟದಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿತು ಎಂದು ಅದಾನಿ ವಿಲ್ಮರ್ ಕಂಪೆನಿ ತಿಳಿಸಿದೆ.
ಫಾರ್ಚುನ್ ಬ್ರ್ಯಾಂಡ್‌ನ ವಸ್ತುಗಳನ್ನು ಅದಾನಿ ವಿಲ್ಮರ್ ಮಾರಾಟ ಮಾಡುತ್ತದೆ. ಇದೇ ರೀತಿ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ, ಸಫೋಲಾ ಎಣ್ಣೆ ಮಾರಾಟ ಮಾಡುವ ಮಾರಿಕೊ ಹಾಗೂ ಡಾಬರ್ ಮತ್ತು ಗೋದ್ರೆಜ್ ಕಂಪೆನಿಯ ಎಫ್ಎಂಸಿಜಿ ವಸ್ತುಗಳು ಸಹ ಈ ಅವಧಿಯಲ್ಲಿ ದಾಖಲೆಯ ಮಾರಾಟ ಕಂಡಿದೆ.