ಬೆಂಗಳೂರು: ತರಕಾರಿ ಬೆಲೆ ಏರಿಕೆ ಬೆನ್ನಲ್ಲೇ ಸುಗ್ಗಿ ಹಬ್ಬದ ಸಾಮಗ್ರಿಗಳೂ ಕೈಸುಡುತ್ತಿವೆ. ಇದರಿಂದ ಈ ಬಾರಿಯ ಸಂಕ್ರಾಂತಿ ಗ್ರಾಹಕರ ಪಾಲಿಗೆ ಕೊಂಚ ದುಬಾರಿ ಆಗಿದೆ. ಹಬ್ಬಕ್ಕೆ ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ಗ್ರಾಮೀಣ ಪ್ರದೇಶಗಳಿಂದ ಹೂವು, ಹಣ್ಣು, ಕಬ್ಬು, ಗೆಣಸು, ಕಡಲೆಕಾಯಿ ಸೇರಿದಂತೆ ಹಬ್ಬದ ಸಾಮಗ್ರಿಗಳು ನಗರದ ಮಾರುಕಟ್ಟೆಗಳಿಗೆ ಬಂದಿಳಿದಿವೆ.
ರಜಾ ದಿನವಾದ ಭಾನುವಾರ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹೂವುಗಳ ಬೆಲೆ ಹೆಚ್ಚು-ಕಡಿಮೆ ದುಪ್ಪಟ್ಟಾಗಿದ್ದು, ಕಬ್ಬು, ಎಳ್ಳು-ಬೆಲ್ಲ, ಕೊಬ್ಬರಿ, ಹುರಿಗಡಲೆ ಮತ್ತಿತರ ಸಾಮಗ್ರಿಗಳ ಬೆಲೆ ಉಳಿದ ದಿನಗಳಿಗಿಂತ ಸರಾಸರಿ 50-100 ರೂ.ಗಳಷ್ಟು ಏರಿಕೆಯಾಗಿದೆ.
ಯಾವುದರ ಬೆಲೆ ಎಷ್ಟು?: ಇನ್ನೊಂದೆಡೆ ಹೂವಿನ ಬೆಲೆ ಏರಿಕೆಯಾಗಿದೆ. ಸೇವಂತಿಗೆ ಮಾರಿಗೆ 150 ರೂ., ಕನಕಾಂಬರ ಒಂದು ದಿಂಡು 80 ರೂ., ಮಲ್ಲಿಗೆ ಮತ್ತು ಮಲ್ಲೆ ಮಾರು 150ರಿಂದ 200 ರೂ., ಕಣಗಲೆ ಒಂದು ಮಾರು 50 ರೂ. ತಲುಪಿತ್ತು. ಸಾಮಾನ್ಯ ದಿನಗಳಲ್ಲಿ ಇವುಗಳ ಬೆಲೆ 50-100 ರೂ. ಕಡಿಮೆ ಇರುತ್ತದೆ. ಇನ್ನು ಏಲಕ್ಕಿ ಬಾಳೆಹಣ್ಣು 50ರಿಂದ 70 ರೂ., ಪಚ್ಚಬಾಳೆ 40 ರೂ., ದಾಳಿಂಬೆ 100 ರೂ., ಮೋಸಂಬಿ 50 ರೂ., ಕಿತ್ತಳೆ 60 ರೂ. ಇತ್ತು. ಗಸಗಸೆಹಣ್ಣು ಅರ್ಧ ಕೆ.ಜಿ.ಗೆ 200 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು.
ಅದೇ ರೀತಿ, ಎಳ್ಳು ಕೆ.ಜಿ.ಗೆ 150-220 ರೂ., ಬೆಲ್ಲ 140ರಿಂದ 160 ರೂ., ಸಣ್ಣದಾಗಿ ಕತ್ತರಿಸಿರುವ ಕೊಬ್ಬರಿ 400-500 ರೂ., ಕಡಲೆಬೀಜ 200 ರೂ. ಹಾಗೂ ಹುರಿಗಡಲೆ 40 ರೂ., ಎಳ್ಳು-ಬೆಲ್ಲದ ಮಿಶ್ರಣ ಕೆ.ಜಿ.ಗೆ 200ರಿಂದ 220 ರೂ. ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 150 ಗ್ರಾಂ. ಎಳ್ಳು-ಬೆಲ್ಲ ಮಿಶ್ರಣದ ಪ್ಯಾಕ್‌ಗೆ 20 ರೂ., 4 ಅಚ್ಚು ಬೆಲ್ಲಕ್ಕೆ 20 ರೂ., 100 ಗ್ರಾಂ ಜೀರಿಗೆ ಮಿಠಾಯಿಗೆ 20 ರೂ., ಸಕ್ಕರೆ ಅಚ್ಚು ಕೆ.ಜಿ 80ರಿಂದ 100 ರೂ.ಗೆ ಮಾರಾಟವಾಗುತ್ತಿದೆ.
ಕೆ.ಆರ್.ಮಾರುಕಟ್ಟೆಯಲ್ಲಿ ಜೋಡಿ ಕಬ್ಬಿನ ಜಲ್ಲೆಗೆ 50ರಿಂದ 60 ರೂ, ಆರು ಗೇಣು ಕಬ್ಬು 20 ರೂ. ಹಾಗೂ ಅದಕ್ಕಿಂತ ಸಣ್ಣ ಕಬ್ಬು 10 ರೂ.ಗಳಿಗೆ ದೊರೆಯುತ್ತಿತ್ತು. ಗಾಂಧಿಬಜಾರ್ ಹಾಗೂ ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ಅದೇ ಜೋಡಿ ಕಬ್ಬಿನ ಬೆಲೆ ದುಪ್ಪಟ್ಟು ಆಗಿದೆ. ಇನ್ನು ಕಂದು ಬಣ್ಣದ ಕಬ್ಬಿನ ಬೆಲೆ 70 ರೂ. ಹಾಗೂ ಕಪ್ಪು ಬಣ್ಣದ ಕಬ್ಬಿನ ಬೆಲೆ 100 ರೂ., ಗೆಣಸು ಕೆ.ಜಿ.ಗೆ 50 ರೂ., ಅರ್ಧ ಕೆ.ಜಿ 30 ರೂ. ಹಾಗೂ ಒಂದು ಲೀಟರ್ ಕಡಲೆಕಾಯಿ ಬೆಲೆ 40ರಿಂದ 50 ರೂ. ಇದೆ ಎಂದು ಕೆ.ಆರ್. ಮಾರುಕಟ್ಟೆ ವ್ಯಾಪಾರಿ ರಮೇಶ್ ತಿಳಿಸಿದರು.
ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಕೆಜಿ ಅವರೇಕಾಯಿ ಬೆಲೆ 50 ರಿಂದ 60 ರೂ, ಅವರೆಕಾಳು ಬೆಲೆ 160 ರೂ. ಹಾಗೂ ಹಿಸುಕಿದ ಅವರೆಕಾಳು (ಅವರೆಬೆಳೆ) 200 ರೂ., ಹುರುಳಿಕಾಯಿ ಕೆಜಿಗೆ 40ರಿಂದ 50 ರೂ. ತಲುಪಿದೆ. ಟೊಮೆಟೊ ಕೆಜಿ 25ರಿಂದ 30 ರೂ. ಇದೆ.