ಕಠ್ಮಂಡು: ನೇಪಾಳದಲ್ಲಿ ಕೇವಲ ಎರಡು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪ್ರಧಾನಿ ಪುಷ್ಪ ಕಮಲ್ ದಹಲ್(ಪ್ರಚಂಡ) ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಸಿಪಿಎನ್-ಯುಎಂಎಲ್ ಪಕ್ಷ ವಾಪಸ್ ಪಡೆದಿದೆ.
ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು “ದೇಶದ ರಾಜಕೀಯ ಸ್ಥಿತ್ಯಂತರಗಳಲ್ಲಿ ಆಗಿರುವ ಬದಲಾವಣೆ ಗಮನಿಸಿಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
ಆದರೆ, ರಾಷ್ಟ್ರಾಧ್ಯಕ್ಷ ಹುದ್ದೆಗೆ ನೇಪಾಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಚಂದ್ರ ಪೌದುಲೆ ಅವರನ್ನು ನೇಮಕ ಮಾಡಲು ಪ್ರಧಾನಿ ಪ್ರಚಂಡ ಒಲವು ತೋರಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಮಾ.9ರಂದು ದೇಶದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ.
275 ಸದಸ್ಯಬಲದ ಸಂಸತ್‌ನಲ್ಲಿ ನೇಪಾಳ ಕಾಂಗ್ರೆಸ್ 89, ಯುಎಂಎಲ್ 79 ಸಂಸದರನ್ನು ಹೊಂದಿದೆ. ಸಿಪಿಎನ್ (ಮಾವೋಯಿಸ್ಟ್ ಸೆಂಟರ್)32, ಸಿಪಿಎನ್ (ಯುನಿಫೈಡ್ ಸೋಶಿಯಲಿಸ್ಟ್) 10, ರಾಷ್ಟ್ರೀಯ ಸ್ವತಂತ್ರ ಪಾರ್ಟಿ 20 ಸಂಸದರನ್ನು ಹೊಂದಿದೆ.
ಸಂಸತ್‌ನಲ್ಲಿ ಪ್ರಚಂಡ ಅವರಿಗೆ ತಮ್ಮ ಸರ್ಕಾರವನ್ನು ಕಾಪಾಡಿಕೊಳ್ಳಲು 138 ಮತಗಳ ಅಗತ್ಯವಿದೆ. ಸಿಪಿಎನ್-ಯುಎಂಎಲ್ ಬೆಂಬಲ ವಾಪಸ್ ಪಡೆದಿದ್ದರೂ, ಸರ್ಕಾರಕ್ಕೆ ಅಲ್ಪಮತದ ಆತಂಕ ಇಲ್ಲ.