Advertisement
ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಲಕ್ಷಾಂತರ ಕೋಟಿ ರೂ.ನಷ್ಟವಾಗಿದ್ದು, ರಾಜ್ಯ ಸರ್ಕಾರ ಅಧಿಕೃತವಾಗಿ 35 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಹ ಪರಿಹಾರ ನೀಡಿಲ್ಲ. ಇದರಿಂದ ನಷ್ಟವನ್ನು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ತನ್ನ ಬೊಕ್ಕಸದಿಂದಲೇ ನೀಡಬೇಕಿದೆ. ಹೀಗಾಗಿ, ಪ್ರವಾಹ ಪರಿಹಾರಕ್ಕಾಗಿ ಹಣ ಹೊಂದಿಸಲು ಹಿಂದಿನ ಸರ್ಕಾರದ ಪ್ರಮುಖ ಜನಪ್ರಿಯ ಯೋಜನೆಗಳಿಗೆ ನೀಡುವ ಅನುದಾನದ ಪ್ರಮಾಣವನ್ನು ಕಡಿತ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Related Articles
Advertisement
ಇಸ್ರೇಲ್ ಮಾದರಿ ಕೃಷಿ: ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಇಸ್ರೇಲ್ ಮಾದರಿ ಕೃಷಿ ನೀತಿಯನ್ನು ಸಮರ್ಥವಾಗಿ ಅನುಷ್ಠಾನ ಮಾಡದೇ ನಿರ್ಲಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮೈತ್ರಿ ಸರ್ಕಾರದಲ್ಲಿ ಯೋಜನೆಗೆ ಕುಮಾರ ಸ್ವಾಮಿಯವರು ಹೆಚ್ಚಿನ ಆಸಕ್ತಿ ವಹಿಸಿ ಸ್ವತ: ಇಸ್ರೇಲ್‌ಗೆ ತೆರಳಿ ಅಧ್ಯಯನ ನಡೆಸಿಕೊಂಡು ಬಂದು ಯೋಜನೆ ಘೋಷಣೆ ಮಾಡಿದ್ದರು. ಅಲ್ಲದೇ, ಮೈತ್ರಿ ಸರ್ಕಾರ ದಲ್ಲಿ ಈ ಯೋಜನೆಗೆ 150 ಕೋಟಿ ರೂ.ಮೀಸಲಿಡ ಲಾಗಿತ್ತು. ಕುಮಾರ ಸ್ವಾಮಿಯವರು ಅಧಿಕಾರದಿಂದ ಇಳಿಯುತ್ತಿದ್ದಂತೆ ಯೋಜನೆ ಕೂಡ ಹಳ್ಳ ಹಿಡಿದಿದೆ.
ಸಿರಿ ಯೋಜನೆ: 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲು ಗುರಿ ಇಟ್ಟುಕೊಂಡು ಪ್ರತಿ ಹೆಕ್ಟೇರ್ ಸಿರಿಧಾನ್ಯ ಬೆಳೆದ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿತ್ತು. ಈ ಯೋಜನೆಗೆ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ 10 ಕೋಟಿ ಮೀಸಲಿ ಟ್ಟಿತ್ತು. ಈಗ ಈ ಯೋಜನೆಯೂ ನನೆಗುದಿಗೆ ಬಿದ್ದಿದೆ. ರೈತರು ಬೆಳೆಯುವ ಪ್ರಮುಖ 12 ಅಧಿಸೂಚಿತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ 510 ಕೋಟಿ ರೂ.ಮೀಸಲಿಡಲಾಗಿತ್ತು. ಯೋಜನೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸದೇ ಇರುವುದ ರಿಂದ ನನೆಗು ದಿಗೆ ಬಿದ್ದಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡದಿದ್ದರೆ, ಯೋಜನೆ ಕೈ ಬಿಟ್ಟಂತಾಗುತ್ತದೆ.
ಸಂಯುಕ್ತ ವಿದ್ಯಾರ್ಥಿ ನಿಲಯ ಯೋಜನೆ: ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಬಾರದು ಎನ್ನುವ ಉದ್ದೇಶಕ್ಕೆ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲೆಗೆ ಒಂದರಂತೆ 30 ಸಂಯುಕ್ತ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಹಿಂದಿನ ಸರ್ಕಾರ ಯೋಜನೆ ರೂಪಿಸಿ, ಬಜೆಟ್‌ನಲ್ಲಿ 100 ಕೋಟಿ ರೂ.ಮೀಸಲಿಟ್ಟಿತ್ತು. ಈ ಯೋಜನೆ ಬಿಜೆಪಿ ಸರ್ಕಾರ ಬಂದ ಮೇಲೆ ನೆನೆಗುದಿಗೆ ಬಿದ್ದಿದ್ದು, ಯೋಜನೆಯನ್ನು ಮುಂದುವರಿಸುವುದು ಅನುಮಾನ ಎನ್ನಲಾಗಿದೆ.
ಇದರಂತೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದ ಉಡುಪು ಕಾರ್ಮಿಕರಿಗೆ, ಬೆಂಗಳೂರಿನ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾರಥಿಯ ಸೂರು ಎಂಬ ಬಾಡಿಗೆ ಆಧಾರದ ವಸತಿ ಕಾರ್ಯಕ್ರಮವನ್ನು ಘೋಷಿಸಿ, 50 ಕೋಟಿ ಮೀಸಲಿಡಲಾಗಿತ್ತು. ಈ ಯೋಜ ನೆಯೂ ಯಾವುದೇ ಬೆಳವಣಿಗೆ ಕಾಣದಿರು ವುದರಿಂದ ತೆರೆಗೆ ಸರಿಸುವ ಸಾಧ್ಯತೆ ಹೆಚ್ಚಿದೆ. ದೀರ್ಘಕಾಲದ ಯೋಜನೆಗಳಿಗೆ ನಿರೀಕ್ಷಿತ ಹಣ ಹೊಂದಾಣಿಕೆ ಮಾಡಲು ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಸರು ಬದಲಾವಣೆ?: ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕಡಿತ ಮಾಡುವುದು ಅಥವಾ ಹೆಸರು ಬದಲಾಯಿಸಿ ತಮ್ಮದೇ ಹೊಸ ಯೋಜನೆ ಎಂದು ಘೋಷಿಸುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಆಸ್ಪತ್ರೆಗಳಲ್ಲಿ ಹೊಸ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
* ಶಂಕರ ಪಾಗೋಜಿ