ಉಡುಪಿ: ವಿವಾಹ ಪೂರ್ವದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದರಿಂದ ಕೆಲವು ವಂಶವಾಹಿ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ರಾಜ್ಯ ಸರಕಾರದ ಬಯೋಟೆಕ್ನಾಲಜಿ ಫೆಸಿಲಿಟೇಷನ್ ಸೆಲ್‌ನ ಡಾ| ಜಗದೀಶ್ ಮಿತ್ತೂರ್ ಹೇಳಿದರು.
ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸಸ್‌ನ (ಎಂಎಸ್‌ಎಲ್‌ಎಸ್) ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಂಶವಾಹಿ ಕಾಯಿಲೆಗಳಿಂದ ಹುಟ್ಟುವ ಮಕ್ಕಳು ಮುಂದೆ ಸಾಮಾನ್ಯ ಜೀವನ ನಡೆಸುವ ಸಾಧ್ಯತೆಗಳು ತೀರಾ ಕಡಿಮೆ. ಕೆಲವು ಕಾಯಿಲೆಗಳಿಗೆ ಔಷಧಗಳ ಲಭ್ಯವಿದೆ ಯಾದರೂ ಸಾಮಾನ್ಯ ಬದುಕು ಕಷ್ಟಸಾಧ್ಯ. ಇಂಥ ಕಾಯಿಲೆಗಳ ಬಗ್ಗೆ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಾರಣಾಸಿಯ ಪ್ರಾಧ್ಯಾಪಕ ಡಾ| ಎಸ್.ಸಿ ಲಕೋಟಿಯಾ ಮಾತನಾಡಿ, ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಅದರತ್ತ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಕುಲಪತಿ ಡಾ| ಎಚ್. ವಿನೋದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸ್ಕೂಲ್ ಆಫ್ ಲೈಫ್ ಸಾಯನ್ಸಸ್‌ನ ನಿರ್ದೇಶಕ ಡಾ| ಸತ್ಯಮೂರ್ತಿ ಸಂಸ್ಥೆಯ 2018-19ನೇ ಶೈಕ್ಷಣಿಕ ಸಾಲಿನ ಸಾಧನೆ ವಿವರಿಸಿದರು.
ಸಹಾಯಕ ನಿರ್ದೇಶಕಿ ಡಾ| ಪದ್ಮಲತಾ ರೈ ಸ್ವಾಗತಿಸಿದರು. ಡಾ| ಕೆ.ಕೆ.ಮಹತೊ ವಂದಿಸಿದರು. ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.