ಹುಬ್ಬಳ್ಳಿ: ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ಗಳು ಸಾಮಾಜಿಕ ಭದ್ರತೆ ಪಿಂಚಣಿಯನ್ನು ತಡೆಹಿಡಿಯುವುದು ಸೂಕ್ತವಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಜಿಲ್ಲಾ ಅಗ್ರಣೀಯ ಬ್ಯಾಂಕ್ ವಿಜಯಾ ಬ್ಯಾಂಕ್ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರದ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಟ್ಯಾಂಕರ್‌ಗಳ ಮೂಲಕ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರತಿ ಕುಟುಂಬಕ್ಕೆ ದಿನಕ್ಕೆ 5 ಕೊಡ ನೀರು ವಿತರಿಸಲಾಗುತ್ತಿದೆ. ಮೇವು, ನೀರು ಲಭಿಸದೇ ರೈತರು ದನ-ಕರುಗಳನ್ನು ಕೈಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ತೊಂದರೆ ನೀಡುವುದು ಸೂಕ್ತವಲ್ಲ ಎಂದರು.
ಜನರು ಡಿಜಿಟಲ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಕೆಲವು ಬ್ಯಾಂಕ್‌ಗಳು ಒಂದೂ ಆರ್ಥಿಕ ಸಾಕ್ಷರತಾ ಶಿಬಿರ ಮಾಡದಿರುವುದು ಬೇಸರದ ಸಂಗತಿ ಎಂದರು. ಅರ್ಹ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಸಮರ್ಪಕವಾಗಿ ಹಂಚಿಕೆಯಾಗಬೇಕು.
ಕೆಲ ರೈತರಿಗೆ 2015ರ ಬೆಳೆ ವಿಮೆ ಸಿಕ್ಕಿಲ್ಲ. ಸಮಸ್ಯೆಗಳನ್ನು ನಿವಾರಿಸಿ ಉಳಿದ ರೈತರಿಗೂ ಬೆಳೆ ವಿಮೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಮುದ್ರಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಬ್ಯಾಂಕ್‌ಗಳು ಸಹಕಾರ ನೀಡಬೇಕು. ಕೆಲವು ಖಾಸಗಿ ಬ್ಯಾಂಕ್‌ಗಳು ಮುದ್ರಾ ಯೋಜನೆಯಡಿ ಸಾಲ ನೀಡಲು ಹಿಂದೇಟು ಹಾಕುತ್ತಿವೆ.
ಭಾರತೀಯ ರಿಜರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ರೈತರಿಗೆ ಪ್ರಧಾನಮಂತ್ರಿ ಬೆಳೆವಿಮೆ ಸಮರ್ಪಕ ಪಾವತಿಗಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಿದ 15 ಜಿಲ್ಲೆಗಳಲ್ಲಿ ಧಾರವಾಡವೂ ಒಂದಾಗಿದ್ದು, ಜಿಲ್ಲೆಗೆ ಪ್ರಶಸ್ತಿ ಸಿಗುವ ಸಾಧ್ಯತೆಯಿದೆ.
ಈ ಸಾಧನೆಗೆ ಎಲ್ಲ ಬ್ಯಾಂಕ್‌ಗಳ ಸಹಕಾರ ಮಹತ್ವದ್ದಾಗಿದೆ ಎಂದರು. ನಬಾರ್ಡ್ ಬ್ಯಾಂಕ್ ಅಧಿಕಾರಿ ಶೀಲಾ ಭಂಡಾರಕರ, ರಿಸರ್ವ್ ಬ್ಯಾಂಕ್ ಅಧಿಕಾರಿ ಗೋಪಿನಾಥ ಮಾತನಾಡಿದರು. ಕೆಂಚಣ್ಣವರ ಇದ್ದರು.