ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪಣ ತೊಟ್ಟಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮ ನಡೆಸಲಾಗಿದೆ. ಇದರೊಂದಿಗೆ ಇಡೀ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಅತ್ಯಂತ ಮಹತ್ತರವಾದ ಮೊದಲ 1000 ದಿನದ ಅರಿವು ಕಾರ್ಯಕ್ರಮವನ್ನು ಹಲ ವಾರು ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಪಿರುಲಿನಾ ಫೌಂಡೆಷನ್ ಹಾಗೂ ವಿವಿಧ ಇಖಾಖೆಗಳ ಸಹಯೋಗದಲ್ಲಿ ನಡೆದ ಅಪೌಷ್ಟಿಕತೆ ನಿವಾರಣೆ ಮತ್ತು ತಡೆಗಟ್ಟುವಿಕೆ ಕುರಿತಾದ “1000 ದಿನಗಳ’ ಮಹತ್ವದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಮಗು ಮೊದಲ 1000 ದಿನದಲ್ಲಿ ಅಪೌಷ್ಟಿಕತೆಗೆ ತುತ್ತಾದರೆ, ಆ ವ್ಯಕ್ತಿ ಜೀವನ ಪರ್ಯಂತ ಶಿಕ್ಷಣ, ವ್ಯವಹಾರ, ಉದ್ಯೋಗ, ಎಲ್ಲಾ ರಂಗಗಳಲ್ಲಿಯೂ ವಿಫಲವಾದ ಸಂದರ್ಭದಲ್ಲಿ ಆತನಿಗೆ ಸರ್ಕಾರದ ನಾನಾ ಸೌಲಭ್ಯ ನೀಡಿ ಮೇಲೆತ್ತುವ ಕೆಲಸ ಮಾಡಬೇಕಾಗುತ್ತದೆ. ಇಂತಹ ಸನ್ನಿವೇಶ ತಪ್ಪಿಸಿ, ಉತ್ತಮ ನಾಗರೀಕನನ್ನಾಗಿ ರೂಪಿಸಿ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಆಗಿದೆ ಎಂದು ಹೇಳಿದರು.
ಮೆದುಳು ಬೆಳೆವಣೆಗೆ ಮುಖ್ಯ: ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಎಸ್. ಕೇದಾರ್ ಮಾತನಾಡಿ, ಮನುಷ್ಯ ಜೀವನದ ಮೊದಲ ಸಾವಿರ ದಿನಗಳಾದ 270 ದಿನಗಳು(9 ತಿಂಗಳ ಗರ್ಭಿಣಿ), 365 ದಿನಗಳು(1ವರ್ಷ), 365 ದಿನಗಳು(2ನೇ ವರ್ಷ) ಅಂತ್ಯಂತ ಪ್ರಮುಖವಾಗಿದ್ದು, ಮನುಷ್ಯ ದೇಹದ ಅಂತ್ಯಂತ ಶ್ರೇಷ್ಠ ಅಂಗವಾದ ಮೆದುಳು ಬೆಳೆಯುವುದು ಈ 1000 ದಿನಗಳು ಮಾತ್ರ ಎಂದರಲ್ಲದೆ, ಈ ಸಮಯದಲ್ಲಿ ಮಗುವಿನ ಪಾಲನೆ, ಪೋಷಣೆಯಲ್ಲಿ ಕೊರತೆ ಉಂಟಾಗಿ, ಮಗುವು ಅಪೌಷ್ಟಿಕತೆಗೆ ತುತ್ತಾದಲ್ಲಿ ಮತ್ತೆಂದೂ ಜೀವನದಲ್ಲಿ ಪೌಷ್ಟಿಕತೆಯ ಕೊರತೆಯನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ತುಮಕೂರು ಸ್ಪಿರುಲಿನಾ ಫೌಂಡೇಷನ್‌ನ ಅಧ್ಯಕ್ಷರು, ಪ್ರತಿನಿಧಿಗಳು ಹಾಗೂ ಮತ್ತಿತರರು ಇದ್ದರು.
ದೇಶದ ಅಭಿವೃದ್ಧಿಗೆ ಸಹಕರಿಸಿ: ಡಾ. ಕೇದಾರ್ : ಕುಂದಿದ ಬುದ್ಧಿಶಕ್ತಿಯುಳ್ಳ ಮಕ್ಕಳು(ಮೆದುಳಿನ ಬೆಳೆವಣಿಗೆ) ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಭವಿಷ್ಯದ ದುಡಿಮೆಯ ಸಂದರ್ಭದಲ್ಲಿ ಹಿಂದುಳಿದು ಬಡತನಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನಾವೆಲ್ಲರೂ 1000 ದಿನದ ಸಂಕಲ್ಪ ಮಾಡಿ, ಪ್ರತಿಯೊಬ್ಬರಲ್ಲೂ 1000 ದಿನದ ಮಹತ್ವದ ಅರಿವನ್ನು ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಸಹಕಾರಿ ಆಗಬೇಕು ಎಂದು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಎಸ್. ಕೇದಾರ್ ಹೇಳಿದರು.