ಅರಸೀಕೆರೆ: ಅಪರಾದ ಸಂಭವಿಸಿದ ಬಳಿಕ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿ ಸುವುದಕ್ಕಿಂತ ದುಷ್ಕೃತ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದೇ ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ನಗರ ಪೋಲಿಸ್ ಠಾಣೆ ಸೇರಿದಂತೆ ಗ್ರಾಮಂತರ ಠಾಣೆ, ಗಂಡಸಿ, ಜಾವಗಲ್, ಬಾಣಾವರ, ಹಾಗೂ ಬೇಲೂರು ವ್ಯಾಪ್ತಿಯ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಗಳನ್ನ ಉದ್ದೇಶಿಸಿ ಮಾತನಾಡಿದರು.
ಶಾಂತಿ ಸುವ್ಯವಸ್ಥೆ ಕಾಪಾಡಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಅತ್ಯಂತ ಮಹತ್ವದಾಗಿದೆ. ಜನಸಂಖ್ಯೆ ಬೆಳೆ ದಂತೆ ಪ್ರದೇಶ ಕೂಡ ವಿಸ್ತಾರವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಪೊಲೀಸ್ ಇಲಾಖೆಯೂ ಅಗತ್ಯ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಸುವ್ಯವಸ್ಥಿತ ಸಮಾಜ ಸ್ಥಾಪನೆಗೆ ಇಲಾಖೆ ಹಗಲಿರುಳೆನ್ನದೇ ಶ್ರಮಿಸುತ್ತಿದೆ. ಇದರಲ್ಲಿ ತಳಮಟ್ಟದ ಪೊಲೀಸ್ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜವಾಬ್ದಾರಿ ಅರಿತು ಕೆಲಸ ಮಾಡಿ: ಡಿವೈಎಸ್ಪಿ ಸದಾನಂದ್ ತಿಪ್ಪಣ್ಣನವರ್ ಮಾತನಾಡಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ತಮ್ಮ ಜವಾಬ್ದಾರಿ ಅರಿತು ಸಿಬ್ಬಂದಿ ಕೆಲಸ ಮಾಡಿದರೆ ಪೊಲೀಸ್ ಇಲಾಖೆ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬಹುದು. ಆದರೆ ಈ ನಿಟ್ಟಿನಲ್ಲಿ ನಮ್ಮಲ್ಲಿ ಇಚ್ಛಾಶಕ್ತಿ ಅಗತ್ಯ ಎಂದರು. ಸಾಮಾನ್ಯಜನರ ಸಂರಕ್ಷಣೆ ಜೊತೆಗೆ ಅವರ ಆಸ್ತಿ ಹಾನಿಗೊಳಗಾಗದಂತೆ ನೋಡಿ ಕೊಂಡಾಗ ಮಾತ್ರ ಪೋಲಿಸ್ ಇಲಾಖೆ ಜನಸ್ನೇಹಿ ಇಲಾಖೆ ಎಂದು ಕರೆಸಿಕೊಳ್ಳುತ್ತದೆ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಅಧಿಕಾರಿಗಳ ಮೆಚ್ಚುಗೆ: ಅರಸೀಕೆರೆ ಹಾಗೂ ಬೇಲೂರು ಠಾಣೆ ವ್ಯಾಪ್ತಿಯಲ್ಲಿ ಸಮರ್ಥ ಸಿಬ್ಬಂದಿ ಇದ್ದಾರೆ. ಇವರೆಲ್ಲರ ಸಹಕಾರದಿಂದ ಹಲವಾರು ಪ್ರಕರಣಗಳನ್ನು ಭೇದಿಸಿ ರಾಜ್ಯದ ಗಮನ ಸೆಳೆದಿರುವುದಷ್ಟೇ ಅಲ್ಲದೇ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ನಾವೆಲ್ಲರೂ ಪಾತ್ರರಾಗಿದ್ದೇವೆ. ಇದೇ ರೀತಿ ಇನ್ನೂ ಕೆಲವು ಪ್ರಕರಣಗಳನ್ನ ಭೇದಿಸಲು ತಾವೆಲ್ಲಾ ಕಾರ್ಯೋನ್ಮುಖರಾಗಬೇಕು.
ಇದಕ್ಕೆ ತಾವು ಸೇರಿದಂತೆ ನಮ್ಮ ಮೇಲಧಿಕಾರಿಗಳ ಸಹಕಾರ ಹಾಗೂ ಮಾರ್ಗದರ್ಶನ ನಿಮಗೆ ಸದಾಕಾಲ ಸಿಗಲಿದೆ ಎಂದು ಭರವಸೆ ನೀಡಿದರು. ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್, ನಗರ ಠಾಣೆ ವೃತ್ತ ನಿರೀಕ್ಷಕ ರಂಗಸ್ವಾಮಿ ಪ್ರಭಾರ ಡಿವೈಎಸ್ಪಿ ಗೋಪಿ, ಜಾವಗಲ್ ಠಾಣೆ ಎಸ್‌ಐ ಪುರುಷೋತ್ತಮ್ ಉಪಸ್ಥಿತರಿದ್ದರು.